ಹೊಸ ಬರಹಗಳು

ಒಂಟಿ ಹಕ್ಕಿ...


ನಮ್ಮ ಮನೆಯ ಕಿಟಕಿಯಲೊಂದು
ಕುಟುಕುತಿಹುದು ಯಾರಿರುವರೆಂದು !
ಎಲ್ಲಿಂದ ಬಂದೆ ನೀ ಒಂಟಿ ಹಕ್ಕಿ ?
ಇಡಬೇಕೆನಿಸಿದೆ ನಿನ್ನ ಮೊಗಕೆ ದೃಷ್ಟಿ ಚುಕ್ಕಿ !            |೧|

ಮೈ ತುಂಬಾ ಕಿತ್ತಳೆ ಬಣ್ಣದ ಚಿತ್ತಾರ
ಮನಮೋಹಕವಾಗಿದೆ ಈ ಹೊಂಬಣ್ಣದ ಬಿತ್ತರ !
ಬಾಣದಂತೆ ಮೊನಚಾಗಿದೆ ನಿನ್ನ ಚಂಚು
ಗೋಲಿಯಂತೆ ಹೊಳೆಯುತಿದೆ ಕಣ್ಣ ಅಂಚು.           |೨|

ದಟ್ಟ ಬೇಸಿಗೆಯ ನಡುವೆ
ಜಟ್ಟಿಯಂತೆ ಬಂದು ಕುಟುಕುವೆ
ನಿನ್ನ ತಲೆ ಸವರಿ ಮುತ್ತಿಡಬೇಕೆನಿಸಿದೆ
ಆದರೆ, ಹತ್ತಿರ ಬರೋ ಮುನ್ನ ಹಾರಿ ಹೋಗುವೆ !     |೩|

ಅತ್ತ-ಇತ್ತ ಹಾರಿ ಎಷ್ಟು ಕಾಳು ಹೆಕ್ಕಿದೆ ?
ಮಳೆಗಾಲಕೆ ಇನ್ನೆಷ್ಟು ಒಟ್ಟು ಮಾಡಬೇಕಿದೆ !
ಸಂಜೆ ಕಳೆದು ಮಬ್ಬಾಗುತಿದೆ ಈಗ
ಕತ್ತಲಾಗೋ ಮುನ್ನ ಗೂಡು ಸೇರು ಬೇಗ                 |೪|

ಸವೆಯದ ಹಾದಿಯಲ್ಲಿ ನಿನ್ನ ಓಡಾಟ !
ಗಾಳಿಯ ಜೊತೆ ನಿನ್ನ ಒಡನಾಟ...
ಅನಾಮಿಕಳಾಗಿಯೆ ಉಳಿದೆ ನೀನು...!
ಮತ್ತೆ ನನ್ನ ಮನೆಗೆ ಬರುವೆಯೇನು...                      |೫|

ಸಚಿನ್ ಕೃಷ್ಣ ಭಟ್



ಕಾಮೆಂಟ್‌ಗಳಿಲ್ಲ