ಹೊಸ ಬರಹಗಳು

ಸ್ವಾರ್ಥ ಮಾನವ ಹಾಗೂ ನಿಸ್ವಾರ್ಥ ಜೀವನ

ಈ ಜಗತ್ತು ಬಹಳ ಸುಂದರ ಹಾಗೂ ವೈವಿಧ್ಯತೆಯಿಂದ ಕೂಡಿದೆ, ಹಾಗೆಯೇ ಇಲ್ಲಿನ ಜನರೂ ಕೂಡ.ನಮ್ಮ ದಿನ ನಿತ್ಯದ ಬದುಕಿನಲ್ಲಿ ಹಲವಾರು ರೀತಿಯ ಜನರನ್ನು ನೋಡಬಹುದು. ಅದರಲ್ಲಿ ಮುಖ್ಯವಾಗಿ ಸ್ವಾರ್ಥ ಮತ್ತು ನಿಸ್ವಾರ್ಥ ಜನರು.ಸ್ವಾರ್ಥ ಜನರು ತಮಗೆ ಮಾತ್ರ ಒಳ್ಳೆಯದಾಗಬೇಕು, ತಾನು ಸಂತೋಷವಾಗಿರಬೇಕು ಎಂದು ಯೋಚಿಸುತ್ತಾರೆ. ಅದರೆ ನಿಸ್ವಾರ್ಥ ಜನರು ತಮಗೂ ಒಳ್ಳೆಯದಾಗಬೇಕು ಹಾಗೂ ಇತರರಿಗೂ ಒಳ್ಳೆಯದಾಗಬೇಕು ಮತ್ತು ಸಂತೋಷವಾಗಿರಬೇಕು ಎಂದು ಯೋಚಿಸಿ ತಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡು ಕೊಳ್ಳುತ್ತಾರೆ. ಆದರೆ ವಿಪರ್ಯಾಸವೆಂದರೆ ಸ್ವಾರ್ಥ ಜನರಿಗೆ ಇಷ್ಟೆಲ್ಲಾ ಯೋಚಿಸಲು ಸಮಯವೂ ಇರುವುದಿಲ್ಲ ಹಾಗೂ ಇತರರು ಹೇಳಿದ್ದನ್ನು ಅವಲೋಕಿಸುವ ತಾಳ್ಮೆಯೂ ಇರುವುದಿಲ್ಲ.ಇನ್ನೊಬ್ಬರಲ್ಲಿ ಕೊಂಕು ಹುಡುಕುವುದರಲ್ಲೇ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ.
ಮಾನವನ ಇಂತಹ ಗುಣಗಳು ಕೆಲವೊಮ್ಮೆ ನಮ್ಮಲ್ಲಿ ಅಚ್ಚರಿಯನ್ನುಂಟು ಮಾಡುತ್ತದೆ ಹಾಗೆಯೇ ದಿಗಿಲನ್ನುಂಟು ಮಾಡುತ್ತದೆ. ಉದಾಹರಣೆಗೆ ನಿಮ್ಮ ಪ್ರೀತಿಯ ಗೆಳೆಯ ಯಾವುದೋ ಒಂದು ಸಣ್ಣ ವಿಚಾರವನ್ನು ಸರಿಯಾಗಿ ಅವಲೋಕಿಸದೆ ನಿಮ್ಮ ಜೊತೆ  ಗೆಳೆತನವನ್ನು ಕೊನೆಗೊಳಿಸುತ್ತಾನೆ. ಇಂತಹ ಘಟನೆಗಳು ನಮಗೆ ಬದುಕಿನಲ್ಲಿ ಸ್ವಾರ್ಥ ಮತ್ತು ನಿಸ್ವಾರ್ಥತೆಯ ವ್ಯತ್ಯಾಸವನ್ನು ತಿಳಿ ಹೇಳುತ್ತದೆ. ಕೆಲವೊಮ್ಮೆ ನಿಜವಾದ ನಿಸ್ವಾರ್ಥ ಮನುಷ್ಯ ಇಂತಹ ಘಟನೆಗಳಿಂದ ನೊಂದು ತನ್ನಲ್ಲಿರುವ ನಿಸ್ವಾರ್ಥತೆಯನ್ನು ನಂದಿಸಲಾರಂಭಿಸುತ್ತಾನೆ. ಕೆಲವೊಮ್ಮೆ ಕಷ್ಟದಲ್ಲಿರುವಾಗ ಅಥವಾ ಅಸಾಹಾಯಕ ನಾಗಿರುವಾಗ ಮನಸ್ಸಿಗೆ ನೋವಾಗಿ ಸ್ವಾರ್ಥಿಯಾಗುವುದರಲ್ಲಿ ಅಚ್ಚರಿಯೇನಿಲ್ಲ. ಆದರೆ ಪ್ರತಿ ದಿನ, ಪ್ರತಿ ಕ್ಷಣ ತನಗೆ ಒಳ್ಳೆಯದಾಗಬೇಕೆಂದು ಯೋಚಿಸಿದರೆ ಹೇಗೆ ಹೇಳಿ! ನಮಗೆ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವೇ !? ಈ ರೀತಿ ಯೋಚಿಸುವ ಜನರು ಬಹು ಬೇಗನೆ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ.
ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವಾರ್ಥಿಗಳಾಗಿರಬಹುದು. ಇದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲದಿದ್ದರು ನಿಸ್ವಾರ್ಥಿಯಾಗುವ ಸಣ್ಣ ಪ್ರಯತ್ನವಾದರೂ ಮಾಡಬೇಕು. ನಮ್ಮಲ್ಲಿ ಸುಪ್ತವಾಗಿರುವ ನಿಸ್ವಾರ್ತತೆಯನ್ನು ಅಭಿವ್ಯಕ್ತಪಡಿಸಬೇಕು. ಈ ಸಮಾಜದಲ್ಲಿ ಬರಿ ತೋರಿಕೆಗೆ ಬೇಕಾಗಿ ನಿಸ್ವಾರ್ಥಿಯಾಗಿರುವುದರಿಂದ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ತೋರಿಕೆಯ ಜೀವನ ನಮ್ಮಲ್ಲಿ ಇರುವ ಸಂತೋಷವನ್ನೂ ಹಾಳುಗೆಡವುತ್ತದೆ.
ಈ ದೊಡ್ಡ ಜಗತ್ತಿನಲ್ಲಿ ಪುಟ್ಟ ಜೀವನ ನಮ್ಮದು. ಪ್ರತಿಯೊಬ್ಬ ಮನುಷ್ಯನೂ ನಿಸ್ವಾರ್ಥಿಗಳಾದರೆ ಅಥವಾ ಕೊನೆಯಪಕ್ಷ ನಿಸ್ವಾರ್ಥಿಗಳಾಗಲು ಪ್ರಯತ್ನ ಪಟ್ಟರೆ ಈ ನಮ್ಮ ಪುಟ್ಟ ಜೀವನ ಎಷ್ಟು ಸುಂದರ ಹಾಗೂ ಸುಖಕರವಾಗಿರಬಲ್ಲದು ಅಲ್ಲವೇ ....?

ಸಚಿನ್ ಕೃಷ್ಣ ಭಟ್

ಕಾಮೆಂಟ್‌ಗಳಿಲ್ಲ