ಹೊಸ ಬರಹಗಳು

ಮರಳಿ ಗೂಡಿಗೆ

ಮತ್ತೆ ಈ ವರುಷವೂ
ಬಂದವು ಮುದ್ದು ಹಕ್ಕಿಗಳು
ನೇತು ಹಾಕಿದ ತಂತಿಯಲಿ
ಪುಟ್ಟ ಮನೆಯ ಮಾಡಲು...
ಅದೇನು ಅವಸರ..ಸಡಗರ..!
ಪುರ್,ಪುರ್ ಎಂದು ಹಾರುವ ಪರಿ..
ಕಸ,ಕಡ್ಡಿ,ಮರದ ತೊಗಟೆ..
ಪುಟ್ಟ ಕೊಕ್ಕಿನಲಿ ತಂದು
ಎಲ್ಲ ಸೇರಿಸಿ..ಮನೆ ಕಟ್ಟುವ ಕೆಲಸ.
ಒಂದಿoಚು ಹೆಚ್ಚಾದರೂ ಕತ್ತರಿಸಿ
ತೆಗೆದು..ಸರಿ ಪಡಿಸಿದ ಮೇಲೆಯೇ
ಮತ್ತೊಂದು ಕಡ್ಡಿ ತರಲು ಹಾರಾಟ
ಅಬ್ಬಾ..ಅದೆಷ್ಟು ಜಾಣತನ.
ಮನೆ ಪೂರ್ಣವಾದ ಮೇಲೆ
ಸುರಿಯಿತು ಧಾರಾಕಾರ ಮಳೆ..
ಪುಟ್ಟ ಮನೆ ಒದ್ದೆ,ಮುದ್ದೆ
ಚೀ..oವ್..ಚೀ..oವ್..ಅಳುವ ಸದ್ದು
ದೂರದ ಮರದಲ್ಲಿ ಕುಳಿತು
ಅಸಹಾಯಕ ನೋಟ..
ನೋವಾಯಿತು ನನ್ನ ಮನಸಿಗು.
" ಬಲು ಜಾಣರಂತೆ ನೀವು
ಮಳೆ ಬೀಳದಲ್ಲಿ ಮನೆ ಕಟ್ಟಬೇಕಿತ್ತು..
ಈ ಮಾನವ ಮುಟ್ಟಿದುದನು
ನೀವು ಮತ್ತೆ ಮುಟ್ಟುವುದಿಲ್ಲವಲ್ಲ
ಕ್ರೂರ ಮಾನವರಲ್ಲವೇ..
ನಂಬುವುದು ಹೇಗಲ್ಲವೇ ..
ಎಂದೆಲ್ಲ ಗೊಣಗುತ್ತಾ.
ಆ ತಂತಿಯನು ಮೆಲ್ಲಗೆ
ಬಾಗಿಸಿದೆ..ಮಳೆ ನೀರು ಬೀಳದಲ್ಲಿಗೇ ..
ದಿನವೆಲ್ಲಾ ಕಾದೆ...ಮುದ್ದು ಹಕ್ಕಿಗಾಗಿ.
ಬರಲೇ ಇಲ್ಲ ..
ಇಂದು ಬೆಳಗ್ಗೆ ಹಕ್ಕಿ ಮನೆ
ಬಿದ್ದು ಹೋಯಿತೇ? ಎಂದು
ಇಣುಕಿಣುಕಿ ನೋಡಿದೆ..
ಕಿಟಕಿಯ ಸಂದಿನಿಂದ.
ಅರೆ ! ಉದ್ದ ಕೊಕ್ಕು ಕಾಣಿಸುತ್ತಿದೆ
ಗೂಡಿನಿಂದ ಹೊರಗೆ ..
ಜೊತೆಗೆ "ಪಿಳಿ,ಪಿಳಿ ಕಂಗಳು. !!
ಆಹಾ..ಪುಟ್ಟ ಮಗುವಿನ ಹಾಗೇ
ಚಪ್ಪಾಳೆ ತಟ್ಟಿ ಕುಣಿಯುವಾಸೆ
ಮನಸಿನಲ್ಲಿ...
ಮನ ಹಾಡುತ್ತಿದೆ..ಬಲು ಹರುಷದಲಿ...
ಅರುಣಾ ಜಿ ಭಟ್

ಕಾಮೆಂಟ್‌ಗಳಿಲ್ಲ