ಹೊಸ ಬರಹಗಳು

ಅಜ್ಜಿಮನೆ - ಒಂದು ನೆನಪು

ಅದೊಂದು ಬಳಂತಿಮೊಗರು ಎನ್ನುವ ಪುಟ್ಟ ಹಳ್ಳಿ. ಬಸ್ ಇಳಿದು ಆರು ಕಿಲೋ ಮೀಟರ್ ಹತ್ತಿ ಇಳಿದು ಅಂಕು ಡೊಂಕಾದ ದಾರಿಯಲ್ಲಿ ಸಾಗಿ ದೂರದಿಂದ ಆ ಮನೆಯ ಛಾವಣಿಯ ತುದಿ ಕಾಣುವಾಗ ನೆಮ್ಮದಿಯ ನಿಟ್ಟುಸಿರು. ಸಂತೋಷಕ್ಕೆ ಪಾರವೇ ಇಲ್ಲದೆ ಬೇಗ ಬೇಗನೆ ಆ ಮನೆ ಸೇರುವ ತವಕ. ಅಲ್ಲೇ ದಾರಿಯ ಅಕ್ಕ ಪಕ್ಕದ ಮನೆಯವರಾದ ಅಪ್ಪಳು,ಲಚ್ಚುಮಿ ಅಜ್ಜಿ, ಚಂದ್ರ ಪಾಟಳಿಯವರ ಜೊತೆ ಮಾತನಾಡಿ ಆ ಮನೆ ತಲುಪಲು ನಿಜವಾಗಿ ಒಂದು ಘಂಟೆಯ ದಾರಿ. ಆದರೆ ಒಂದೂ ಮುಕ್ಕಾಲು ಘಂಟೆ ಬೇಕಿತ್ತು. ಅದುವೇ ನನ್ನ ನೆಚ್ಚಿನ ಅಜ್ಜಿ ಮನೆ.
ರಜಾ ಸಮಯ ಹತ್ತಿರ ಬಂದಂತೆ ಏನೋ ಒಂದು ಖುಷಿ. ಈ ಬಾರಿ ಹದಿನೈದು ದಿನವೋ ಇಲ್ಲ ಇಪ್ಪತ್ತು ದಿನವೋ ಕುಳಿತುಕೊಳ್ಳಬೇಕೋ ಎಂಬ ಲೆಕ್ಕಾಚಾರ. ನಾನು ಮತ್ತು ಅಣ್ಣನ ಮಧ್ಯೆ ನಾನು ಮೊದಲು ತಾನು ಮೊದಲು ಹೋಗಿ ಕೂರಬೇಕು ಎಂದು ಗಲಾಟೆ.ನಾವು ಹೆಚ್ಚಾಗಿ ಅಮ್ಮನ ಜೊತೆ ಅಜ್ಜಿ ಮನೆ ಹೋಗುತ್ತ್ತಿದ್ದೆವು.ಹೋಗುವಾಗ ಅಣ್ಣಪ್ಪನ ಹೋಟೆಲ್ ನಲ್ಲಿ ಬನ್ಸ್ ಸಾಂಬಾರ್ ತಿಂದು ಅಜ್ಜ-ಅಜ್ಜಿಗೆಂದು ಖಾರದ ಕಡ್ಡಿ ಮತ್ತೆ ಕೆಲವು ಅಲ್ಲಿಯ ತಿಂಡಿ ತೆಗೆದುಕೊಂಡು ಹೋಗುತ್ತ್ತಿದ್ದೆವು. ಅದೊಂದು ಚಿಕ್ಕದಾದ ಹೋಟೆಲ್ ಆದರೆ ತುಂಬಾ ಸ್ವಚ್ಛವಾಗಿ ಇಟ್ಟುಕೊಂಡಿದ್ದರು ಆ ಹೋಟೆಲ್ ಮಾಲಿಕ ಅಣ್ಣಪ್ಪನ ಮಗ. ಅಮ್ಮ ಶಾಲೆಗೆ ಹೋಗುವಾಗಲೇ ಆ ಹೋಟೆಲ್ ಗೆ ಅಜ್ಜನ ಜೊತೆ ಹೋಗುತ್ತಿದ್ದರಂತೆ. ಹಾಗೆ ಆ ಪರಿಚಯದ ಲೆಕ್ಕದಲ್ಲಿ ನನಗೆ ಮತ್ತು ನನ್ನ ಅಣ್ಣನಿಗೆ ಒಂದೊಂದು ಮೈಸೂರ್ ಪಾಕ್ ಪ್ರೀತಿಯ ಉಡುಗೊರೆ. ಅದನ್ನು ಸ್ವಲ್ಪ ಸ್ವಲ್ಪವೇ ಕಚ್ಚಿ ತಿಂದು ಅಣ್ಣನ ಕೈಯಲ್ಲಿ ಎಷ್ಟು ಮುಗಿದಿದೆ ಎಂದು ನೋಡುವುದು. ಅವನು ಕಡಿಮೆ ತಿಂದಿದ್ದರೆ ಮತ್ತೆ ನಾನು ತುಂಬಾ ನಿಧಾನವಾಗಿ ತಿನ್ನುತ್ತಿದ್ದೆ. ಅವನ ತಿನ್ನುವ ಮೈಸೂರು ಪಾಕ್ ಮುಗಿಯುವವರೆಗೆ ಕಾಯುತ್ತಿದ್ದೆ.ನಂತರ ನಿಧಾನವಾಗಿ ನನ್ನ ಬ್ಯಾಟಿಂಗ್ ಶುರು. ಹೀಗೆ ಏನಾದರೊಂದು ಮಕ್ಕಳಾಟಿಕೆ ಮಾಡದೆ ಬಾಲ್ಯದ ನೆನಪು ಬರಲು ಹೇಗೆ ಸಾಧ್ಯ ಹೇಳಿ !
ಪುನಃ ಬರುವಾಗ ನಾರಾಯಣನ ಅಂಗಡಿಯಿಂದ ಊರಿನ ಜೇನು ಖರೀದಿ ಮಾಡಿ ಮನೆಗೆ ತಂದು ಹಲಸಿನ ಕಾಯಿ ದೋಸೆ ಜೊತೆಗೋ ಇಲ್ಲ ಕಾಲಿ ಅಕ್ಕಿ ದೋಸೆ ಜೊತೆಗೋ ತಿನ್ನುತ್ತಿದ್ದೆವು. ಅಮ್ಮ ಮಾಡಿದ ಆ ತೆಳುವಾದ ಹಲಸಿನ ಕಾಯಿ ದೋಸೆ ಜೊತೆ ಊರಿನ ಜೇನು ಕೂಡಿ ತಿನ್ನುವುದೇ ಒಂದು ಸಂಭ್ರಮ. ಜೋರು ಶೀತ ಜ್ವರ ಬಂದರೆ ಇಪ್ಪಿಲಿ, ಜೇಷ್ಠ ಮದ್ದು ಹಾಗೂ ಶುಂಠಿಯನ್ನು ಸವೆದು ಅದಕ್ಕೆ ಜೇನು ಹಾಕಿ ಅಪ್ಪ ಕುಡಿಯಲು ಕೊಡುತ್ತಿದ್ದರು. ಎರಡೇ ದಿನದಲ್ಲಿ ಶೀತ ಜ್ವರ ಮಾಯ. ಹೀಗೆಯೇ ಆಡು ಸೋಗೆ ಕಷಾಯ, ಅಮೃತ ಬಳ್ಳಿ ಕಷಾಯ, ಮಜ್ಜಿಗೆ ಸೊಪ್ಪು ಜೊತೆ ಬೆಲ್ಲ ಕರಿ ಮೆಣಸು ಸೇರಿಸಿ ಕಷಾಯ. ಒಂದಲ್ಲ ಎರಡಲ್ಲ ಹಲವು ಮಾದರಿಯ ಮನೆಯಲ್ಲಿಯೇ ತಯಾರಿಸಬಹುದಾದ ಔಷಧಿಗಳು.
ಈಗ ಹಾಗಲ್ಲ. ಕಾಲ ಬದಲಾಗಿದೆ. ಆ ಔಷಧೀಯ ಸಸ್ಯ ಯಾವುದೆಂದು ಪತ್ತೆ ಮಾಡುವುದೇ ಕಷ್ಟ.ಅದನ್ನು ಹೇಗೆ ಮಾಡುತ್ತಿದ್ದರು ಎಂಬುದು ತಿಳಿದುಕೊಳ್ಳಲು ಸಮಯವಿದ್ದರೂ ಸಮಯವಿಲ್ಲ ಈಗಿನ ಜನರಿಗೆ. ಹಿಂದೆಲ್ಲಾ ಅಷ್ಟೆಲ್ಲಾ ಮನೆ ಕೆಲಸ, ತೋಟದ ಕೆಲಸ, ದನದ ಕೊಟ್ಟಿ ಕೆಲಸ ಮಾಡಿ ಕೂಡ ಇಂತಹ ವಿಷಗಳನ್ನೆಲ್ಲಾ ತಿಳಿದುಕೊಂಡಿರಲಿಲ್ಲವೇ ? ಅವಾಗಲೆಲ್ಲಾ ಜನರು ಹೆಚ್ಚು ಓದುತ್ತಿರಲಿಲ್ಲ. ಆದರೆ ಅಗತ್ಯವಾಗಿ ಬೇಕಾದ ಸಾಮಾನ್ಯ ಜ್ಞಾನವನ್ನು ತಿಳಿದಿದ್ದರು. ಒತ್ತಡವಿದ್ದರೂ ಅದನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿದ್ದರು. ತಮ್ಮ ತಮ್ಮ ಮನೆಯ ಹೊಲಗಳಲ್ಲಿ ದುಡಿದು ಬೆಳೆ ಬೆಳೆಯುತ್ತಿದ್ದರು. ಪರಸ್ಪರ ಹೊಂದಿಕೊಂಡು ಬಾಳುತ್ತಿದ್ದರು.ಇತ್ತೀಚೆಗೆ ಜನರಲ್ಲಿ ಅನಾವಶ್ಯಕವಾದ ಒತ್ತಡ ಜಾಸ್ತಿಯಾಗಿದೆ. ಸಾಮಾನ್ಯ ಜ್ಞಾನ ಕಡಿಮೆಯಾಗಿ ಕಾಲಿ ಜ್ಞಾನ ಮಾತ್ರ ಉಳಿದುಕೊಂಡಿದೆ.
ಆ ಅಜ್ಜಿ ಮನೆ, ಅಲ್ಲೇ ಪಕ್ಕದಲ್ಲಿ ಬೆಳೆದಿದ್ದ ನೇರಳೆ ತಿರುಳಿನ ಪೇರಳೆ ಮರ, ಗುಡ್ಡೆಯಲ್ಲಿ ಮಾವನ ಜೊತೆ ಮರ ಏರಿ ಜೋಕಾಲಿಯಾಡುತ್ತಿದ್ದ ಗೇರು ಬೀಜದ ಮರ,ತೋಟದಲ್ಲಿದ್ದ ಸೀತಾಫಲ ಹಣ್ಣು ಹಾಗೂ ಅತ್ತಿ ಹಣ್ಣು ಇನ್ನು ಬರಿಯ ಕಲ್ಪನೆ ಮಾತ್ರ. ಕಷಾಯಗಳು ಬರಿಯ ಕನಸು ಮಾತ್ರ. ಕಾಲ ಬದಲಾದಂತೆ ಮನೆ-ಮನಸ್ಸು ಬದಲಾಗಿದೆ.ಮನುಷ್ಯರೂ ಬದಲಾಗಿದ್ದಾರೆ.
ಹೀಗೆ ಸುಮ್ಮನೆ ಕುಳಿತು ಯೋಚಿಸುತ್ತಾ ಷೆ ! ಮತ್ತೆ ಆ ಕಾಲ ಬರಲು ಸಾಧ್ಯವಿಲ್ಲ ಎಂಬ ಬೇಸರ. ಪಡುವಣದಲ್ಲಿ ಹಾರುತ್ತಿರುವ ಸಣ್ಣ ಕಪ್ಪು ಹಕ್ಕಿಗಳ ಹಿಂದೆ ಮಾಸಿದ ಕೆಂಪು ಕಿರಣದ ನಡುವೆ ಹಾಗೂ ಹದವಾದ ಗಾಳಿಯ ಜೊತೆ ನಿದಾನವಾಗಿ ಮುಳುಗತಿದ್ದ ನೇಸರ.
ಸಚಿನ್ ಕೃಷ್ಣ ಭಟ್
ಬದಿಕೋಡಿ

1 ಕಾಮೆಂಟ್‌: