ಅಜ್ಜಿಯ ದುಂಡು ಬೊಟ್ಟು
ಮನೆಯ ಹಿತ್ತಲಲ್ಲಿ
ಸಂಜೆಯ ಹೊತ್ತಿನಲ್ಲಿ
ಹುಳ ಹಿಡಿದ ಹರಿವೆ ಸಸಿಗೆ
ಒಲೆಯ ಬೂದಿ ಹಾಕುತ್ತಿದ್ದೆ..
ಅಲ್ಲಿ ಕಂಡೆ..ಹಳೆಯದಾದ
ಬ್ಯಾಟರಿಯ ಮುಚ್ಚಳವನ್ನು..
ಆ ಕ್ಷಣದಲ್ಲಿ ಕಣ್ಣಮುಂದೆ
ಕಂಡಿತು ನನ್ನಜ್ಜಿಯ ರೂಪ...
ನನ್ನಮ್ಮನಮ್ಮನ ದುಂಡು ಮುಖ
ಹಣೆಯ ಮೇಲಿನ ದುಂಡನೆ ಬೊಟ್ಟು..
ಒಂದಿಷ್ಟು ಆಕಾರ ಕೆಡದ ..ಹುಣ್ಣಿಮೆ
ಚಂದಿರನ ನೆನಪಿಸುವ ಬೊಟ್ಟು..
ನನ್ನಜ್ಜಿ ಬೊಟ್ಟಿಡುವ ರೀತಿ ಬಲು ಚಂದ...
ಎರಡು ಕಾಲು ಚಾಚಿ ಕುಳಿತು
ಕಾಲ ನಡುವೆ ಕನ್ನಡಿ..
ಹಣೆಯ ಮೇಲೆ ಬ್ಯಾಟರಿಯ ಮುಚ್ಚಳವನಿಟ್ಟು..ಆ ಜಾಗಕೆ
ಜೇನು ಮೇಣವ ಹಚ್ಚಿ..ಅದರ ಮೇಲೆ
ಕುಂಕುಮ ಇಟ್ಟು..ಮೆಲ್ಲನೆ..
ಆ ಮುಚ್ಚಳ ತೆಗೆದರಾಯಿತು..
ಆಹಾ..ಎಂತಾ ಚಂದದ ಬೊಟ್ಟು..
ನನ್ನಜ್ಜಿಯ ದುಂಡು ಬೊಟ್ಟಿನ ಗುಟ್ಟು
ನಾನು ಅರಿತ ಆ ದಿನಗಳು..
ಮತ್ತೆ,ಮತ್ತೆ ಮಧುರ ಗಾನವಾಗಿ
ಗುoಯ್ ಗುಟ್ಟುತ್ತಿದೆ ಕಿವಿಯ ಬಳಿ..
ತೇಲುತಿರುವೆ ಅದೇ ಗುಂಗಲಿ..
ಅರುಣಾ.ಜಿ.ಭಟ್.
ಕಾಮೆಂಟ್ಗಳಿಲ್ಲ