ಹೊಸ ಬರಹಗಳು

ಸ್ನೇಹ

ಸಂಜೆಯ ಹೊತ್ತು.ಅಪೂರ್ವಳಿಗೆ ಮಲಗಿ,ಮಲಗಿ ಸಾಕಾಗಿ ಹೋಗಿತ್ತು.ಆದರೂ ಏಳುವಂತಿಲ್ಲ.ಕಣ್ಣೀರು ಮೆಲ್ಲನೆ ಕೆನ್ನೆಯನ್ನುತೋಯಿಸುತ್ತಾ ದಿಂಬಿನ ಮೇಲೆ ಬೀಳುತ್ತಿತ್ತು.
ಅಷ್ಟರಲ್ಲಿ ಸತೀಶ್ ಬಂದ.ಅಪೂರ್ವಳ ಬೆನ್ನ ಹಿಂದೆ ದಿಂಬನ್ನಿಟ್ಟು ಸ್ವಲ್ಪ ಸಮಾಧಾನವಾಗುವ ರೀತಿಯಲ್ಲಿ ಮಲಗಿಸಿದ.ಪತ್ನಿಯನ್ನು ಸಮಾಧಾನಿಸಿ ಅವಳಿಗೆ ಬೇಕಾದುದನ್ನು ಕೊಟ್ಟು ರಾತ್ರಿಯ ಅಡುಗೆಯ ತಯಾರಿಗೆ ಹೊರಟ.
ಅಪೂರ್ವ ಮೆಲ್ಲನೆ ಪಕ್ಕದಲ್ಲಿದ್ದ ಮೊಬೈಲ್ ನ್ನು ಕೈಗೆತ್ತಿಕೊಂಡಳು..ನಡುಗುವ ಎಡದ ಕೈಯಿಂದ ಫೇಸ್ ಬುಕ್ ಓಪನ್ ಮಾಡಿದಳು.ನೋವನ್ನು ಮರೆಯಲು,ಸಮಯ ಸಾಗಿಸಲು ಕೆಲವು ದಿವಸಗಳಿಂದ ಫೇಸ್ ಬುಕ್ ಅವಳಿಗೆ ಅಗತ್ಯವೆಂದು ಅನಿಸುತ್ತಿತ್ತು.
ಓಪನ್ ಮಾಡಿದಾಕ್ಷಣ ಹಲವರ ಸಂದೇಶಗಳು ಬರಲಾರಂಭಿಸಿತು.
ಅದರಲ್ಲೂ ನಿನ್ನೆಯಷ್ಟೇ ಹೊಸ ಫೇಸ್ ಬುಕ್ ಫ್ರೆಂಡ್ ಆದ ವ್ಯಕ್ತಿಯಿಂದ ಬಂದ ಸಂದೇಶಗಳು ಹಲವಿದ್ದವು.ಅಪೂರ್ವಳಿಗೆ "ಚ್ಯಾಟ್" ಮಾಡುವ ಅಭ್ಯಾಸವು ಇರಲಿಲ್ಲ.
ಕೆಲವು ದಿವಸಗಳಿಂದ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದು ಅಕ್ಷರ "ಟೈಪಿಸಲು" ಸಾಧ್ಯವಾಗುತ್ತಿರಲಿಲ್ಲ.
ನಿನ್ನೆಯಿಂದ ಸಂದೇಶ ಕಳಿಸುತ್ತಿದ್ದ ಆ ವ್ಯಕ್ತಿಯಿಂದ ಮತ್ತೆ ಸಂದೇಶಗಳ ಸುರಿಮಳೆ.
ಸಂದೇಶ ಕಳುಹಿಸ ಬೇಡಿ.ನನಗಿಷ್ಟವಿಲ್ಲ..ಅಂತ ಬರೆದು ಕಳುಹಿಸ ಬೇಕೆಂದರೂ ಸಾಧ್ಯವಾಗಲಿಲ್ಲ.ಕೈ ನೋವಿಗೆ ಕಣ್ಣಲ್ಲಿ ನೀರು ತುಂಬಿ ತುಳುಕಿತ್ತು.
"ಏನ್ರಿ ನೀವು .ಇಷ್ಟು "ಮೆಸೇಜ್ " ಕಳುಹಿಸಿದರೂ ಸುಮ್ಮನಿದ್ದೀರಲ್ಲ.ಒಂದಕ್ಕೂ ಉತ್ತರಿಸುವುದಿಲ್ಲ.ಯಾವ ಸೀಮೆಯ "ಫ್ರೆಂಡ್"ನೀವು? ಈ ಕ್ಷಣ ದಿಂದಲೇ ನೀವು "ಅನ್ ಫ್ರೆಂಡ್"ಅನ್ನುವ ಸಂದೇಶ ಅದೇ ವ್ಯಕ್ತಿಯಿಂದ ಬಂತು.
ಹಲವು ವರ್ಷಗಳಿಂದ ಜೊತೆಗಿರುವ ಆತ್ಮೀಯ "ಫ್ರೆಂಡ್ಸ್"ಗಳೆಲ್ಲಾ ಮತ್ತೊಮ್ಮೆ ನೆನಪಾದರು.
ಹಾಗಾದರೆ ಈ ಫೇಸ್ ಬುಕ್ ಫ್ರೆಂಡ್ ಅಂದ್ರೆ ಅರ್ಥವಾದರೂ ಏನು? ಚ್ಯಾಟ್ ಮಾಡುತ್ತಾ ಇರುವುದೇ?
ಜೀವನದಲ್ಲಿಒಂದು ಬಾರಿಯೂ ಮುಖವನ್ನೇ ನೋಡಿರದ,ಆ ವ್ಯಕ್ತಿ ಯಾವ ಪರಿಸ್ಥಿತಿಯಲ್ಲಿರುವನೆಂಬ ಕಲ್ಪನೆಯೂ ಇರದೇ...ಹೇಗೆ ಹೇಗೋ ಸಂದೇಶ ಕಳುಹಿಸಿ ...ತೊಂದರೆ ಕೊಡುವುದೇ..
ಉತ್ತರ ಬಾರದೇ ಇದ್ದಾಗ ತೀರಾ ಸುಲಭದಲ್ಲಿ" ಅನ್ ಫ್ರೆಂಡ್"!!!!
ಸ್ನೇಹ ಎನ್ನುವ ಎರಡಕ್ಷರದ ಪದದ ಅರ್ಥ ವಿಶಾಲ.ಇದನ್ನು ಅರಿಯದವರೂ ಈ ರೀತಿ ವರ್ತಿಸುವರೇನೋ? ಎಂದೆಲ್ಲ ಹಲವಾರು ಪ್ರಶ್ನೆಗಳು ಅಪೂರ್ವಳ ಮನವನ್ನು ಕಾಡ ತೊಡಗಿತು.
ಬೇರೇನೂ ತೊಂದರೆ ಕೊಡದೆ "ಅನ್ ಫ್ರೆಂಡ್ "ಆದುದನ್ನು ನೆನೆದು ನೋವಿದ್ದರೂ ಅಪೂರ್ವಳ ತುಟಿಯಂಚಿನಲ್ಲಿ ಸಣ್ಣ ನಗುವಿತ್ತು.ಜೊತೆಗೆ ವಿಷಾದವೂ ಇತ್ತು.
-ಅರುಣಾ ಜಿ ಭಟ್

ಕಾಮೆಂಟ್‌ಗಳಿಲ್ಲ