ಹೊಸ ಬರಹಗಳು

ಅಮ್ಮನ ಕೈ ಅಡುಗೆ ಮತ್ತೆ ಫೋಟೋ...

ಒಳ್ಳೊಳ್ಳೆ ರುಚಿಕರವಾದ ತಿಂಡಿ ತಿನಿಸುಗಳನ್ನು ತಿನ್ನುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಹಿಂದೆಲ್ಲಾ ಶನಿವಾರ ಅಥವಾ ಆದಿತ್ಯವಾರ ವಿಶೇಷವಾದ ತಿಂಡಿ ಅಂತ ಎನಿರಲಿಲ್ಲ.ಆದರೆ ಈಗಿನ ಕೆಲಸದ ಒತ್ತಡ ಅಥವಾ ಕಾಲದ ಪರಿಮಿತಿಯಿಂದಾಗಿ ಇಂತಹ ಅಡುಗೆಗಳನ್ನು ಮಾಡಲು ವೀಕೆಂಡ್ ಬರಲಿ ಅಂತ ಕಾಯುತ್ತಿರುತ್ತೇವೆ. ಅದು ನಿಜ ಕೂಡ. ಯಾಕೆಂದರೆ ಮನೆಯವರು ಎಲ್ಲಾ ಆಫೀಸ್ ಕೆಲಸಕ್ಕೆ ಹೋಗಿ ಬಂದು ದಣಿವಾಗಿರುತ್ತಾರೆ. ಮತ್ತೆ ಬಗೆ ಬಗೆಯ ತಿಂಡಿ ಮಾಡಲು ಆಸಕ್ತಿಯೂ ಇರುವುದಿಲ್ಲ ಹಾಗೆಯೇ ಶಕ್ತಿಯೂ ಕೂಡ !

ಹೀಗೆ ಬಗೆ ಬಗೆಯ ತಿಂಡಿ ಎಂದ ತಕ್ಷಣ ನೆನಪಿಗೆ ಬರುವುದು ಅಮ್ಮ ಮಾಡಿ ಕೊಡುತ್ತಿದ್ದ ತಿಂಡಿ ತಿನಸುಗಳು...ಎಲ್ಲರಿಗೂ ಅಷ್ಟೇ....ಅಮ್ಮ ಮಾಡಿದ ತಿಂಡಿ ತಿನಿಸುಗಳ ಎದುರು ಬೇರೆ ಯಾವದೂ ರುಚಿಕರ ಅಂತ ಅನಿಸುವುದಿಲ್ಲ.ದಿನಾಲೂ ಏನಾದರೂ ಒಳ್ಳೊಳ್ಳೆಯ ಅಡುಗೆ ಮಾಡಿ ಬಡಿಸುತ್ತಿದ್ದಳು. ಸಾವಿರ ಬಾರಿ ನಮ್ಮ ಹತ್ತಿರ ಏನು ಮಾಡಲಿ ಅಂತ ಕೇಳಿ ಉತ್ತರ ಕೊಡದಿದ್ದಾಗಲೂ, ಬೇಸರ ಮಾಡದೆ ಖುಷಿ ಖುಷಿಯಾಗಿ ತರ ತರದ ತಿಂಡಿ ಮಾಡಿ ಬಡಸುತ್ತಿದ್ದಳು.ಸುಮ್ಮನೆ ಕುಳಿತು ಕಿಟಕಿಯಾಚೆ ನೋಡುತ್ತಿದ್ದರೆ ಆ ತಿಂಡಿಗಳೆಲ್ಲ ಹಾಗೆ ಕಣ್ಣಮುಂದೆ ಬಂದು ಹೋಗುತ್ತದೆ.ಅಂತಹ ರುಚಿಕರವಾದ ಅಡುಗೆ ಅಮ್ಮಂದಿರ ಅಡುಗೆ ! ಅದು ಬೆಳಗ್ಗೆ ಮಾಡುವ ತಿಂಡಿ ಇರಬಹುದು ಅಥವಾ ಮಧ್ಯಾಹ್ನದ ಊಟ ಅಥವಾ ಸಂಜೆಯ ಟೀ ಜೊತೆಗೆ ತಿನ್ನುವ ಬಿಸಿ ಬಿಸಿ ಕರು-ಕುರು ತಿಂಡಿ ಆಗಿರಬಹುದು.

ಮಳೆಗಾಲದಲ್ಲಿ ರಜೆ ಬಂತೆಂದರೆ ನಂಗೆ ಖುಷಿಯೋ ಖುಷಿ. ಸಂಜೆಯ ಟೀ ಗೆ ಬಿಸಿ ಬಿಸಿ ಪೋಡಿ ಅಥವಾ ಕ್ಷೀರ ಅಥವಾ ಕಾರದಕಡ್ಡಿ ಏನಾದರೂ ಒಂದು ಅಮ್ಮನ ವಿಶೇಷವಾದ ತಿಂಡಿ ಗ್ಯಾರಂಟೀ ಅವತ್ತು. ಮಧ್ಯಾಹ್ನ ಊಟ ಮಾಡಿ ಮನೆಯವರೆಲ್ಲಾ ಒಂದೇ ಜಗಲಿಯಲ್ಲಿ ಮಲಾಗುತ್ತಿದ್ದೆವು. ಅಪ್ಪ ಅಮ್ಮ ಇಡೀ ದಿನ ಮನೆ ಕೆಲಸ ಅಥವಾ ತೋಟದ ಕೆಲಸ ಮಾಡಿ ದಣಿವಾಗಿರುತ್ತದೆ. ಅದಕ್ಕೆ ಮದ್ಯಾಹ್ನ ಮಲಗುತ್ತಿದ್ದರು. ಆದರೆ ಈ ತಿಂಡಿ ಮಾಡುವ ದಿನ ಎಂದಿನಂತಲ್ಲ. ಅಮ್ಮ ಮದ್ಯಾಹ್ನ 2.30ಕ್ಕೆ ನಮಗೆಲ್ಲ ಎಚ್ಚರವಾಗದಂತೆ ಎದ್ದು ಮೆಲ್ಲಗೆ ಅಡುಗೆ ಕೋಣೆಗೆ ಕಾಲಿಡುತ್ತಿದ್ದಳು. ಆದರೆ ನನಗೆ ನಿದ್ದೆ ಬರುವುದಿಲ್ಲ ಸಂಜೆಯ ತಿಂಡಿ ನೆನೆದು. ಆದರೂ ಅಮ್ಮ ಎದ್ದು ನನ್ನನ್ನು ನೋಡಿದಾಗ ಗಟ್ಟಿ ಕಣ್ಣು ಮುಚ್ಚಿ ಘಾಡ ನಿದ್ರೆಗೆ ಜಾರಿದಂತೆ ನಾಟಕ ಮಾಡುತ್ತಾ ಇದ್ದೆ. ಅಮ್ಮ ಒಳಗಡೆ ಹೋದ ತಕ್ಷಣ ಮನಸ್ಸಿನ ಒಳಗೆ ಒಂದು ಮುಗುಳುನಗೆ. ಸ್ವಲ್ಪ ಸಮಯದ ನಂತರ ಒಳಗಿಂದ ಪಾತ್ರೆಯ ಶಬ್ದ ಅಥವಾ ಪ್ಲಾಸ್ಟಿಕ್ ಬಿಡಿಸುವ ಶಬ್ಧ ಕೇಳಿ ಆಸಕ್ತಿಯಿಂದ ಎದ್ದು ಹೋಗಿ ಏನು ಮಾಡುತ್ತಿದ್ದಾರೆ ಅಂತ ನೋಡಿ ಅಮ್ಮನ ಕೈಯ್ಯಿಂದ "ಇಷ್ಟು ಬೇಗ ಎದ್ದು ಎಂತ ಮಾಡುದು...ಹೋಗಿ ಮಲಗು" ಅಂತ ಬೈಗಳು ತಿಂದಿದ್ದು ಇದೆ.ಹೀಗೆ ಯಾರ ಸಹಾಯವೂ ಇಲ್ಲದೆ ಎಷ್ಟೇ ಕಷ್ಟದ ತಿಂಡಿ ಆದರೂ ಒಬ್ಬರೇ ಮಾಡಿ ನಾಲ್ಕು ಗಂಟೆಯ ಟೀ ಜೊತೆ ಸವಿಯಲು ತಿಂಡಿ ರೆಡಿ...ಮಾಡಿದ ತಿಂಡಿ ಬಗ್ಗೆ "ಅಮ್ಮಾ ತಿಂಡಿ ಸೂಪರ್" ಅಂತ ಅಭಿಪ್ರಾಯ ಹೇಳಿದರೆ ಆ ಮೊಗದಲ್ಲಿ ಅದೇನೋ ಸಂತಸ. !

ಈಗ ನಮಗೆಲ್ಲ ಒಂದು ಅಭ್ಯಾಸವಿದೆ. ವಾರಾಂತ್ಯದಲ್ಲಿ ಬಗೆ ಬಗೆಯ ತಿಂಡಿ ಮಾಡುವುದು, ಅದನ್ನು ಫೋಟೋ ತೆಗೆದು ಎಡಿಟ್ ಮಾಡಿ ವಾಟ್ಸಾಪ್ ಸ್ಟೇಟಸ್ ಅಥವಾ ಇನ್ಸ್ಟಾಗ್ರಾಮ್ನ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತೇವೆ. ಹೀಗೆ ಅಡುಗೆ ಮಾಡಿ ಎವೆರೆಸ್ಟ್ ಶಿಖರ ಏರಿ ದೊಡ್ಡ ಸಾಧನೆ ಮಾಡಿದಂತೆ ಅನಿಸುವುದು ಸಹಜ.ಹಾಗಿದ್ದರೆ ಅಮ್ಮಂದಿರು ಅಡುಗೆಗಳನ್ನು ಎಲ್ಲಾ ಹೀಗೆ ಫೋಟೋ ತೆಗದು ಇಡುತ್ತಿದ್ದರೆ ಇದನ್ನೆಲ್ಲಾ ಶೇಖರಿಸಿಡಲು ಬಹುಶ ಎಷ್ಟು ಮೆಮೊರಿ ಕಾರ್ಡ್ ಕೊಂಡರು ಕೂಡ ಸಾಲುತ್ತಿರಲಿಲ್ಲ.ನಾನು ಆ ತಿಂಡಿ ಮಾಡಿದೆ ಈ ತಿಂಡಿ ಮಾಡಿದೆ ಅಂತ ಹೇಳದೆ ಸುಮ್ಮನೆ ಕಿರುನಗೆ ಬೀರಿ ಮುಂದಿನ ಕೆಲಸಕ್ಕೆ ಹೋಗುತ್ತಿದ್ದಳು "ಅಮ್ಮ".

ಸಚಿನ್ ಭಟ್
ಬದಿಕೋಡಿ

3 ಕಾಮೆಂಟ್‌ಗಳು: