ಹೊಸ ಬರಹಗಳು

ನನ್ನವರ ಬಿಳಿ ತಲೆ ಕೂದಲು ಕಪ್ಪಗಾದ ಕಥೆ...

" ನನ್ನವರ ಬಿಳಿ ತಲೆಕೂದಲು ಕಪ್ಪಗಾದ ಕಥೆ"
ಈ ಕಥೆ ಹೇಳಬೇಕೆಂದು ತುಂಬಾ ದಿವಸಗಳಿಂದ ಯೋಚಿಸುತ್ತಿದ್ದೆ.ಆದರೆ ಸಮಯ ಕೂಡಿ ಬರಲಿಲ್ಲ.ಅಥವಾ ಆ ಸಮಯವನ್ನು ನಾನು ಹಿಡಿದು ಇಡಲಿಲ್ಲವೇನೋ.!?
ಐದಾರು ವರ್ಷಗಳ ಹಿಂದಿನ ಕಥೆ.ಕಥೆ ಎಂದು ನುಡಿದು ನಾನೇಕೆ ಸುಳ್ಳು ಹೇಳಲಿ.ನಿಜ ಘಟನೆಯೇ ಆಯ್ತಾ.ಆಗ ನನ್ನವರ ತಲೆಯಲ್ಲಿ ಕಪ್ಪು ಕೂದಲು ಅಲ್ಪ ಸಂಖ್ಯೆಯಾಗಿತ್ತು.ಬಿಳಿ ಕೂದಲು ಅವರ ಮುಖದ ಬೆಳ್ಳನೆ ನಗುವಿನ ಜೊತೆ ಪೈಪೋಟಿ ಮಾಡುತ್ತಾ ಮಿರುಗುತ್ತಿತ್ತು.
ಪಳ,ಪಳ ಹೊಳೆಯುತ್ತಿತ್ತು.
ಮಕ್ಜಳಿಬ್ಬರದು ಒಂದೇ ರಾಗ.ಅಪ್ಪ ನೀವು ಕೂದಲಿಗೆ ಕಪ್ಪು ಹಚ್ಚಲೇ ಬೇಕು.ಮುಖದಲ್ಲಿ ವಯಸಾಯಿತೆಂದು ಗೊತ್ತಾಗುವುದಿಲ್ಲ.ಹೇರ್ ಡೈ ಮಾಡಿಸಿದರೆ "ಯಂಗ್ ಮೇನ್" ಆಗ್ತೀರಿ..ಎಂದು ಹೇಳುತ್ತಿದ್ದರು.
ನನಗೂ ಒಳ ಮನಸಿನಲ್ಲಿ ಆಸೆಯಿತ್ತೆನ್ನಿ.ಆ ವಿಚಾರ ಈಗ್ಯಾಕೆ.ಬಿಟ್ಟು ಬಿಡಿ.
ಆದರೆ ನನ್ನವರು ಒಪ್ಪಲೇ ಇಲ್ಲ.ತಲೆ ಕೂದಲು ಬಿಳಿ ಆಗುವುದು ಸಹಜ.ಅದು ಹಾಗೆಯೇ ಇರಲಿ.ಇರುವ ಚಂದವೇ ಸಾಕು ಎನ್ನುತ್ತಿದ್ದರು.
ಹಾಕಲೆ ಬೇಕೆಂದಾದರೆ ನಿನ್ನ ಮದುವೆ ಸಮಯಕ್ಕೆ ತಲೆಗೆ ಕಪ್ಪು ಹಚ್ಚಿ ಕೊಳ್ಳುತ್ತೇನೆ ಎಂದು ನಮ್ಮ ದೊಡ್ಡ ಮಗನೊಡನೆ ನಗುತ್ತ ನುಡಿದಿದ್ದರು.ಅವನೂ ಬಿಡ್ತಾನಾ ಮಾತಲ್ಲಿ.ಆಗ ಬೇಡಪ್ಪ.ಎಲ್ಲಿಯಾದರೂ ಮದುಮಗನ ತಮ್ಮ ಎಂದು ಹುಡುಗಿ ಕಡೆಯವರು ತಿಳಿದು ಕೊಂಡರೆ ಕಷ್ಟ..ಎಂದಿದ್ದ.ನಗುವೋ ನಗು.
ತಲೆ ಕೂದಲು ಕಪ್ಪಾಗಿಸುವ ವಿಚಾರ ಅಲ್ಲಿಗೇ ಕೈ ಬಿಡಲಾಗಿತ್ತು.ಹಲವಾರು ತಿಂಗಳುಗಳು ಉರುಳಿತ್ತು.ಒoದು ದಿವಸ ನನ್ನವರುಹೇರ್ ಕಟ್ ಮಾಡಿಸಲು ಹೋಗಿದ್ದರು.ಆ ದಿನ ಬರುವಾಗ ಮುಸ್ಸಂಜೆ ಆಗುತ್ತಾ ಬಂದಿತ್ತು.
ನಾನು ಅಂಗಳದಲ್ಲಿ ಹೂವಿನ ಗಿಡಗಳಿಗೆ ನೀರು ಹಾಕುತ್ತಿದ್ದೆ.ನೀರು ಹಾಕುವ ಕೆಲಸ ಮುಗಿಸಿಯೇ ಬರ್ತೇನೆ...ಎಂದು ಹೇಳಿದೆ.
ಉತ್ತರವಿಲ್ಲ.ನೋಡುವಾಗ ಸಿಟೌಟ್ ನಲ್ಲಿ ಕುಳಿತಿದ್ದರು.ಎರಡು ಬಾರಿ ಕೆಮ್ಮಿದರು.ಆಗ ಸೂಕ್ಷ್ಮವಾಗಿ ಗಮನಿಸಿದೆ.ತಕ್ಷಣಕ್ಕೆ ನೆನಪಿಗೆ ಬಂದದ್ದು ತೆನಾಲಿ ರಾಮ ಮಡಿಕೆ ತಲೆಗೆ ಹಾಕಿಕೊಂಡ ಕಥೆ.!
ನೀರು ಹಾಕುವ ಕೆಲಸವನ್ನು ಬಿಟ್ಟು ಒಳಗೆ ಬಂದೆ.ನನ್ನವರ ತಲೆ ಕಪ್ಪೋ ಕಪ್ಪು.ಒದ್ದೆ,ಒದ್ದೆ ಕೂದಲು.ಸ್ನಾನ ಮಾಡಿದ ಕಾಗೆಯನ್ನು ನೆನಪಿಸುತ್ತಿತ್ತು.
ಕಪ್ಪು ಬಣ್ಣ ಕೂದಲಿಗೆ ಮಾತ್ರವಲ್ಲ.ಹಣೆಯ ಬದಿಯಲೂ ಇತ್ತು.ಹೊಸ ಮಣ್ಣಿನ ಮಡಿಕೆಗೆ ಗೇರು ಬೀಜದ ಸಿಪ್ಪೆಯ ಎಣ್ಣೆ ಹಚ್ಚಿಟ್ಟ ಹಾಗೇ ಕಾಣಿಸುತಿತ್ತು.ಹಳ್ಳಿಯ ಸೆಲೂನ್ .ಎಲ್ಲರ ತಲೆಕೂದಲು ಒಂದೇ ರೀತಿಯಲ್ಲಿ ಕಟ್ ಮಾಡುವುದು.ಆಕಾರ ವ್ಯತ್ಯಾಸವಿಲ್ಲ.ಕಪ್ಪು ಹಚ್ಚಲು ಹೇಳಿದ್ದಕ್ಕೆ ಹಚ್ಚಿದ್ದಾರೆ.ನಾಲ್ಕು ಜನರ ತಲೆಗೆ ಹಚ್ಚುವ ಬಣ್ಣ ಒಬ್ಬರ ತಲೆಗೇ ಹಚ್ಚಿದ ಹಾಗಿತ್ತು.ರೂಪವೇ ಬದಲಾದ ಹಾಗೆ ಕಂಡಿದ್ದರು.ತಕ್ಷಣ ಫೋಟೋ ತೆಗೆದು ವಾಟ್ಸಾಪ್ ನಲ್ಲಿ ಮಕ್ಕಳಿಗೆ ಕಳಿಸಿದ್ದೆ.
ಮೀಸೆಗೆ ಕಪ್ಪು ಹಚ್ಚದೇ ಹಾಗೆ ಕಾಣಿಸುತ್ತದೆ ಎಂದು ಮಕ್ಕಳು ಸಮಾಧಾನ ಹೇಳಿದ್ದರು.
ನನ್ನವರ ಮುಖದ ಗಂಭೀರ ಕಳೆಯ ಆ ಲಕ್ಷಣವೇ ಕಾಣೆಯಾಗಿತ್ತು.
ನನ್ನವರು ಇಂಗು ತಿಂದ ಮಂಗನ ಹಾಗೇ ಸಪ್ಪಗಿದ್ದರು.ನನಗೂ ಬೇಸರ.ಬಿಳಿ ಕೂದಲೇ ಚಂದವಿತ್ತು.ಛೇ..ಛೇ ಎಂದಿದ್ದೆ ಹಲವು ಬಾರಿ.
ಮುಖ ನೋಡಿದರೆ ನನಗೆ ನಗು ಉಕ್ಕಿ ಬರುತಿತ್ತು.ನಿನಗೇನೋ ತಮಾಷೆ.ನನ್ನ ಕಷ್ಟ ನನಗೆ ...ಎಂದು ಗೊಣಗಿದ್ದು ಕೇಳಿಸಿದರೂ ಕೇಳದವಳಂತಿದ್ದೆ.ಬೇಗ ಈ ಬಣ್ಣ ಮಾಸಲಿ.ಕೂದಲು ಬಿಳಿ ಆಗಲಿ ಎಂದು ಕಾಯಲು ಆರಂಭಿಸಿದ್ದೆ.ಮತ್ತೆಂದೂ ನನ್ನವರು ತಲೆಕೂದಲಿಗೆ ಕಪ್ಪು ಬಣ್ಣ ಹಚ್ಚಲಿಲ್ಲ.
ಅವರ ಬಿಳಿ ಕೂದಲು...ಬೆಳ್ಳಗೆ ನಗುವೂ ಹಾಗೇ ಇರಲಿ ಎಂದು ಕೊಂಡು ನಿಶ್ಚಿoತಳಾಗಿದ್ದೆ .
ಬಿ.ಅರುಣಾ.ಜಿ.ಭಟ್.ಬದಿಕೋಡಿ.

ಕಾಮೆಂಟ್‌ಗಳಿಲ್ಲ