ಹೊಸ ಬರಹಗಳು

ಬ್ರೇಕಿಂಗ್ ನ್ಯೂಸ್(ಸುಮ್ನೇ ತಮಾಷೆಗೆ)

" ಬ್ರೇಕಿಂಗ್ ನ್ಯೂಸ್"(ಸುಮ್ನೇ,ತಮಾಷೆಗೆ)
ವೀಕ್ಷಕರೇ, ನ್ಯೂಸ್ ಗಳ ವಿವರ ತಿಳ್ಕೊಳ್ಳೋದಕ್ಕೂ ಮೊದಲು ಒಂದು "ಬ್ರೇಕಿಂಗ್ ನ್ಯೂಸ್ " ಬರ್ತಾ ಇದೆ.ಅದೇನು ಅಂತ ನೋಡೋಣ...( ಡo...ಡಡಾo..ಡಿಡ್ಡಿಂ)
ಹಿನ್ನೆಲೆ ಸಂಗೀತದ ಸದ್ದು..
ಹಳ್ಳಿಯ ಮನೆಯೊಂದರ ಅಂಗಳದ ಮೂಲೆಯ ಮರಳು ರಾಶಿಯ ಬಳಿ ಏನೋ ಒಂದು ಪುಟ್ಟ ಜೀವಿಯ ತರಹ ಕಂಡು ಬಂದಿದೆ.
ದುಂಡು ಮೊಗದ ಕಲ್ಲಪ್ಪನಂತೆ.ಅವನಿಗೆ ಬೆಳ್ಳಿ ಕಿರೀಟ ತೊಡಿಸಿದ್ದು ಯಾರು?!, ಬಿಳಿ ಸಿಂಹಾಸನದಲ್ಲಿ ಕೂರಿಸಿ "ಪಟ್ಟಾಭಿಷೇಕ" ಮಾಡಿಸಿದ್ದು ಯಾರು?ಇವ ಎಲ್ಲಿಂದ ಬಂದಾ?
ಈ ಕಲ್ಲಪ್ಪನ ಸುತ್ತಾ ಈಗ ಅನುಮಾನದ ಹುತ್ತ ಬೆಳೆಯುತ್ತಿದೆ ವೀಕ್ಷಕರೇ..(ಕಲ್ಲಪ್ಪನ ಮೇಲೆ,ಬಿಳಿ ಕಿರೀಟದ ಮೇಲೆ ಕೆಂಪು ಬಣ್ಣದ ಬಾಣದ ಗುರಿತುಗಳು ಈಗ) ಮತ್ತೆ ಸಂಗೀತ.!
ಆ ಸಂಗೀತದ ಸದ್ದು ಮುಗಿಯುವ ತನಕ ಮೇಲೆ ಬರೆದುದನ್ನು "ಕೊನೆಯ ವಾಕ್ಯದಿಂದಾರಂಭಿಸಿ ...ಆರಂಭದ ವಾಕ್ಯದ ತನಕ ಓದುತ್ತಾ ಹೋಗಬೇಕು.?!
ಮತ್ತೆ ಕಲ್ಲಪ್ಪನ ಚಿತ್ರ..ವೀಕ್ಷಕರೇ ಈಗ ಆ ಕಲ್ಲಪ್ಪನ ವಿಚಾರವನ್ನು ನಮ್ಮ ವರದಿಗಾರ ನೇರವಾಗಿ ಆ ಹಳ್ಳಿ ಮನೆಯ ಅಂಗಳದಿಂದ ವಿವರಿಸಲಿದ್ದಾರೆ.
ಅದಕ್ಕೂ ಮೊದಲು ಒಂದು ಪುಟ್ಟ ಬ್ರೇಕ್.
ಬ್ರೇಕ್ ನಂತರ ವರದಿ.
ಸುಮಾ ಅವರೇ..ಇಲ್ಲಿ ಊರಿನ ಜನರೆಲ್ಲ ಸೇರಿದ್ದಾರೆ.ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಿದ್ದಾರೆ.ಯಾರೋ ಮಾಂತ್ರಿಕರು ಇದನ್ನು ತಂದಿಟ್ಟಿದ್ದಾರೆ..ಎಂಬ ಅಭಿಪ್ರಾಯವೂ ಕೇಳಿ ಬರ್ತಿದೆ ಸುಮಾ ಅವರೇ...ಅನ್ಯ ಗ್ರಹದ ಜೀವಿಯೇನೋ ಎಂಬ ಅನುಮಾನವು ಕಾಡುತ್ತಿದೆ.
ನಾವೀಗ ಮನೆಯೊಡತಿ "ಅರುಣಾ " ಅವರನ್ನೇ ನೇರವಾಗಿ ಮಾತನಾಡಿಸೋಣ.
"ಈ ಕಲ್ಲಪ್ಪನ ಕಥೆ ಏನು?ಎಲ್ಲಿಂದ ಬಂದ? ಸ್ವಲ್ಪ ವಿವರಿಸ್ತೀರಾ?
ಅಯ್ಯೋ...ನಿಮ್ಮ ಮಾತು ಕೇಳುವಾಗ ನನಗೆ ಇಲ್ಲಿ ತನಕ ಇಲ್ಲದ ಭಯ ಕಾಡುತ್ತಿದೆ.ಏನೇನೋ ಹೇಳಿ ಹೆದರಿಸಬೇಡಿ.ಇದು ಮರಳು ರಾಶಿಯಲ್ಲಿದ್ದ ಪುಟ್ಟ ಕಲ್ಲು.ಅದಕ್ಕೆ ಒಂದು "ಕಪ್ಪೆ ಚಿಪ್ಪು ಅಂಟಿ ಕೊಂಡಿದೆ ಅಷ್ಟೇ.ಬೇರ್ಪಡಿಸಲಾಗದ ಹಾಗಿದೆ.ಬೇರೇನೂ ಅಲ್ಲಪ್ಪ..(ಅರುಣಾರವರ ವಿವರಣೆ ಮುಗಿಯುವ ಮೊದಲೇ ಸಂಭಾಷಣೆ ಕಟ್.!?)
ನಮ್ಮ ವರದಿಗಾರರಿಗೆ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ..ಮುಂದಿನ ಸುದ್ದಿಗಳತ್ತ ಗಮನ ಹರಿಸೋಣ.(ಮತ್ತೆ ಸಂಗೀತ)
ಓದಿ,ಓದಿ ಸುಸ್ತಾದಿರಾ.ನನ್ನ ಮೇಲೆ ಕೋಪ ಬಂತೇ..ಪರವಾಗಿಲ್ಲಪ್ಪ.ಬೇಗನೆ ರಾಜಿಯಾಗುವ ನಂಬಿಕೆಯಿದೆ.
ಬಿ.ಅರುಣಾ.ಜಿ.ಭಟ್.ಬದಿಕೋಡಿ.

ಕಾಮೆಂಟ್‌ಗಳಿಲ್ಲ