ಗೋಪಣ್ಣನೂ ಯಕ್ಷಗಾನ ಬಯಲಾಟವೂ
ಎಪ್ಪತ್ತೈದರ ಹರೆಯದ ಗೋಪಣ್ಣನಿಗೆ ಬಲು ಸಂಭ್ರಮ.ಬೆಳಗ್ಗಿನಿಂದ ಅದೆಷ್ಟು ಬಾರಿ ಟಿ.ವಿ.ವೀಕ್ಷಿದರೋ? ಲೆಕ್ಕವಿಲ್ಲ.
ಇಂದು ಚಾನೆಲ್ ಒಂದರಲ್ಲಿ ಅವರ ಮುದ್ದಿನ ಮೊಮ್ಮಗನ ಸಂದರ್ಶನ .ಆರು ವರ್ಷದ ಪೋರ.ಈಗಾಗಲೇ ಹಲವಾರು ಯಕ್ಷಗಾನ ಬಯಲಾಟದಲ್ಲಿ ಪಾತ್ರ ಮಾಡಿ ಜನರ ಮೆಚ್ಚುಗೆ ಗಳಿಸಿದ ಪುಟಾಣಿ.ದುಂಡು ಮುಖ.ಪಟ,ಪಟ ಮಾತು.ಯಾರನ್ನು ಕಂಡರೂ ಮೊಗದ ತುಂಬಾ ಮುದ್ದಾದ ನಗು.ಹಾಗೆಯೇ ಎತ್ತಿಕೊಂಡು ಮುದ್ದು ಮಾಡೋಣ ಎಂದಿನಿಸುವಂತ ಕಂದ ಪರೀಕ್ಷಿತ.
ಚಾನೆಲ್ನವರು ಆಗಾಗ ಸಂಜೆ ಪ್ರಸಾರವಾಗಲಿರುವ ಸಂದರ್ಶನ ಕಾರ್ಯಕ್ರಮದ ಕುರಿತಾದ ಜಾಹಿರಾತು ಹಾಕುತ್ತಲೇ ಇದ್ದರು.
ಹಲವು ಪತ್ರಿಕೆಗಳಲ್ಲಿಯೂ ಪರೀಕ್ಷಿತನ ಪರಿಚಯ ಲೇಖನ ಪ್ರಕಟವಾಗಿತ್ತು.ಶಾಲೆಯಲ್ಲಿಯೂ ಪ್ರೋತ್ಸಾಹವಿತ್ತು.ಸಿಕ್ಕಿದ ಬಹುಮಾನಗಳು ಮನೆಯ ಶೋಕೇಸ್ ನಲ್ಲಿ ಮುದ್ದಾಗಿ ಕುಳಿತಿದ್ದವು.
ಗೋಪಣ್ಣನವರಿಗೆ ಬಾಲ್ಯದಿಂದಲೇ ಯಕ್ಷಗಾನ ಬಯಲಾಟ,ತಾಳಮದ್ದಳೆಗಳೆಂದರೆ ಬಲು ಪ್ರೀತಿ.ಎಷ್ಟು ಬಯಲಾಟ ನೋಡಿದ್ದಾರೋ.ಇನ್ನು ಆಕಾಶವಾಣಿಯಲಿ ಪ್ರಸಾರವಾಗುವ ಒಂದು ತಾಳಮದ್ದಳೆಯನ್ನೂ ಅವರು ಬಿಟ್ಟಿಲ್ಲ.ಮನೆಯಲ್ಲಿ ಮಕ್ಕಳು ಗಲಾಟೆ ಮಾಡುತ್ತಿದ್ದರೆ...ಪುಟ್ಟ ರೇಡಿಯೋವನ್ನು ಕಿವಿಯ ಹತ್ತಿರ ಹಿಡಿದು ಕೊಂಡು ಅಂಗಳದಲ್ಲಿ ನಿಲ್ಲುತ್ತಿದ್ದರು.
ಸಂಜೆಯ ಹೊತ್ತಿಗೆ ತಾಂಬೂಲದ ತಟ್ಟೆಗೆ ಚೂರಿಯಿಂದ ತಾಳಬದ್ಧ್ಹವಾಗಿ ಮೆಲ್ಲಗೆ ಕುಟ್ಟುತ್ತಾ ಯಕ್ಷಗಾನದ ಪದ ಹೇಳುವುದೂ ಇತ್ತು.ಇಂತಹ ಯಕ್ಷಗಾನ ಪ್ರೇಮಿಗೆ ವೇಷ ಕಟ್ಟಿ ಕುಣಿಯಬೇಕೆಂಬಾಸೆಯಿತ್ತು.
ಮಕ್ಕಳು ದೊಡ್ಡವರಾಗಿದ್ದರು.ತನ್ನ ಐವತ್ತೈದನೇ ವಯಸ್ಸಿನಲ್ಲಿ ಗೋಪಣ್ಣ ಯಕ್ಷಗಾನದ ನಾಟ್ಯದ ಮೊದಲ ಪಾಠವನ್ನು ಸ್ವಲ್ಪ ಕಲಿತಿದ್ದರು.ಕೇಳಿದ,ನೋಡಿದ ಅನುಭವದಿಂದಲೇ ಅರ್ಥ ಹೇಳಲು ಅಭ್ಯಾಸವಾಗಿತ್ತು.
ಹತ್ತಿರದ ಊರಿನ ಹವ್ಯಾಸಿ ತಂಡದಲ್ಲಿ ಸಣ್ಣ,ಪುಟ್ಟ ವೇಷ ಹಾಕಿ ಸಂಭ್ರಮಿಸಿದ್ದರು.
ಅಣ್ಣ,ತಮ್ಮಂದಿರು ,ನೆರೆ ಕರೆಯುವರು ಗೋಪಣ್ಣನ ಕುರಿತು ಏನೇನೋ ಹೇಳಿ ಹಿಂದಿನಿಂದ ನಗುತ್ತಿದ್ದರು.ಮಕ್ಕಳು ದೊಡ್ಡವಾರದ ಮೇಲೂ ಇವನಿಗೆಂತಾ ಹುಚ್ಚು.ಆಟದಲ್ಲಿ ವೇಷ ಹಾಕಿ ಕುಣಿಯುತ್ತಾನೆ.ಮಗನು,ಪತ್ನಿಯೂ ಇಬ್ಬರೇ ರಾತ್ರಿ ಮನೆಯಲ್ಲಿ ಇರುವುದು.ಇವನಿಗೆ ಸ್ವಯ ಉಂಟಾ? ಎಂದು ಹೇಳುತ್ತಿದ್ದರು.ಗೋಪಣ್ಣನಿಗೆ ಅಪ್ಪನ ಆಸ್ತಿಯ ಪಾಲಿನಲ್ಲಿ ಸಿಕ್ಕಿದ್ದು ಹಳೆಯ ಅಡಿಕೆ ಮರಗಳಿದ್ದ ತೋಟ..ಬೇಸರವಾದರೂ ...ಜಗಳ ಬೇಡವೆಂದು ಗೋಪಣ್ಣ ಮೌನವಾಗಿ ಒಪ್ಪಿದ್ದರು.
ಎಷ್ಟು ಸಾಕಿದರು ಫಸಲಿಲ್ಲ."ಆಟದಲ್ಲಿ ವೇಷ ಹಾಕಿ ಕುಣಿದು ತೋಟ ಹಾಳು ಮಾಡಿದ"ಎನ್ನುವ ಅಪವಾದವೂ ಸುತ್ತಿಕೊಂಡಿತ್ತು.ಆದರೆ ಯಕ್ಷಗಾನದ ಸೆಳೆತ ಆ ಕಲೆಯ ಕುರಿತ ಒಲವು ಗೋಪಣ್ಣನನ್ನು ಮತ್ತೆ,ಮತ್ತೆ ಆ ಕಡೆಗೇ ಕರೆಯುತ್ತಿತ್ತು.
ಒಂದು ಬಾರಿ ಅನಿರೀಕ್ಷಿತವಾಗಿ ಸ್ತ್ರೀ ವೇಷ ಹಾಕುವಂತ ಸಂದರ್ಭ ಬಂದಿತ್ತು.ಅದನ್ನು ಒಪ್ಪಿದ್ದರು .ಆದರೆ ಮರುದಿವಸ ಎಲ್ಲರೂ ನಗುವವರೆ.ಆ ಗೋಪಣ್ಣನಿಗೆ ಮುದಿ ಭ್ರಾoತು .ಅಬ್ಬೆ ಸತ್ತವನ ಹಾಗೆ ಗಡ್ಡ,ಮೀಸೆ ಬೋಳಿಸಿದ್ದಾನೆ.ಹೀಗೇ ಆದ್ರೆ ಇಲ್ಲದ ದುರಾಭ್ಯಾಸಗಳನ್ನು ಕಲಿತು ಹಾಳಾಗಿ ಹೋಗ್ತಾನೆ ಅವನ ಹೆಂಡತಿಗಾದ್ರು ಬುದ್ದಿ ಬೇಡವಾ..ಯಾರು ಹೇಳುವುದು ಇವರಿಗೆ.. ?ಎಂದು ಹೇಳುವುದು ಪತ್ನಿ ಗಿರಿಜಮ್ಮನ ಕಿವಿಗೂ ಬಿದ್ದಿತ್ತು..
ಈ ಮಾತುಗಳು ಗೋಪಣ್ಣನಿಗೆ ತುಂಬಾ ನೋವು ಕೊಟ್ಟಿತ್ತು.ಕ್ರಮೇಣ ವೇಷ ಹಾಕುವುದನ್ನು ಬಿಟ್ಟಿದ್ದರು.ಆದರೆ ಆ ನೋವು ಮನದೊಳಗೇ ಇತ್ತು.ಕಲೆ,ಅದರ ಬೆಲೆ ಅರಿಯದವರಿಗೆ ಏನು ಹೇಳಿಯೂ ಪ್ರಯೋಜನವಿಲ್ಲವೆಂದು ಸಮಾಧಾನ ತಂದು ಕೊಂಡಿದ್ದರು.
ಆದರೆ ಆ ಕಲೆಯಲಿ ಈಗ ಮೊಮ್ಮಗ ಮಿಂಚುತ್ತಿದ್ದ.ಅಜ್ಜನ ಕನಸು,ಆಸೆಗಳು ಸಾಕಾರ ಗೊಂಡಿದ್ದವು.ಪರೀಕ್ಷಿತನ ವೇಷ ನೋಡಿ ತಮ್ಮ ಮಕ್ಕಳನ್ನೂ ಹತ್ತಿರದ ಮನೆಯವರು ಯಕ್ಷಗಾನದ ನಾಟ್ಯ ಕಲಿಯಲು ಕಳುಹಿಸುತ್ತಿದ್ದಾರೆ.
ಸಂಜೆಯ ಹೊತ್ತು ಮೊಮ್ಮಗ ಅಜ್ಜನಿಗೆ ನಾಟ್ಯ ಕಲಿಸುತ್ತಾನೆ.ನಾಲ್ಕುಹೆಜ್ಜೆಗೆ ಅಜ್ಜ ಸುಸ್ತಾಗಿ ಸೋಫಾದಲ್ಲಿ ಕುಸಿದು ಕುಳಿತಾಗ ಮನೆಯವರಿಗೆಲ್ಲಾ ನಗು."ಅಜ್ಜ ಸುಸ್ತಾಗಿ ಕುಳಿತದ್ದಲ್ಲ.ಮುಂದಿನ ಸ್ಟೆಪ್ ನೆನಪು ಮಾಡುವುದು..ಎಂದು ಪರೀಕ್ಷಿತ ಒಂದು ಕಣ್ಣು ಮುಚ್ಚಿ ನಾಲಿಗೆ ಹೊರ ಚಾಚಿ ನಗುತ್ತಾ ನುಡಿಯುತ್ತಾನೆ.ಆಳದಲ್ಲಿ ಅಡಗಿದ್ದ ಸಣ್ಣ ಬೇರೊoದು ಚಿಗುರಿ ಮರವಾಗುವ ಹಾಗೇ..ಗೋಪಣ್ಣನ ಮನದಾಳದ ಬಯಕೆ ಮೊಮ್ಮಗನಲ್ಲಿ ಮೂಡಿ ನೆಮ್ಮದಿಯ ತಂದಿದೆ
ಬಿ.ಅರುಣಾ.ಜಿ.ಭಟ್.ಬದಿಕೋಡಿ.
ಕಾಮೆಂಟ್ಗಳಿಲ್ಲ