ಕೇರೆ ಹಾವು ಮತ್ತು ಹಕ್ಕಿಗಳು
ಮಧ್ಯಾಹ್ನದ ಹೊತ್ತು.ದಿನ ಪತ್ರಿಕೆ ಓದುತ್ತಾ ಕುಳಿತಿದ್ದೆ.ಮುದ್ದಿನ ನಾಯಿಗಳ ಗದ್ದಲವೋ ಗದ್ದಲ.ಅಂಗಳದ ಸುತ್ತಲೂ ಕಣ್ಣಾಡಿಸಿದೆ.ಏನು ಕಾಣಿಸಲಿಲ್ಲ.ನಾಯಿಗಳು ಬೊಗಳುವುದು ನಿಲ್ಲಿಸಲಿಲ್ಲ.
ಸರ,ಸರ ಎನ್ನುವ ಸಣ್ಣ ಸದ್ದು.ಸೂಕ್ಷ್ಮವಾಗಿ ಗಮನಿಸಿದೆ.ಮನೆಯಂಗಳದ ಮಾವಿನ ಮರದಿಂದ ಸದ್ದು ಕೇಳಿಸುತ್ತಿತ್ತು.ಅಷ್ಟೆತ್ತರದ ಮರದ ಮುಕ್ಕಾಲು ಭಾಗದಷ್ಟು ಎತ್ತರದಲ್ಲಿ ದೊಡ್ಡ ಕೇರೆ ಹಾವು ಮೆಲ್ಲನೆ ಹರಿದಾಡುತ್ತಾ ಮೇಲೇರುತಿತ್ತು.ಅಬ್ಬಾ,ಇದರ ಸಾಹಸವೇ!ಅಂತ ಅಂದು ಕೊಂಡೆ.
ಅಷ್ಟರಲ್ಲಿ ನಾಲ್ಕು ಪುಟಾಣಿ ಹಕ್ಕಿಗಳು ಗೆಲ್ಲಿನಿಂದ ಗೆಲ್ಲಿಗೆ ಅವಸರ,ಅವಸರವಾಗಿ ಹಾರ ತೊಡಗಿದವು.ಹೂವುಗಳ ಮಕರಂದ ಸವಿಯುವ ಪುಟಾಣಿ ಹಕ್ಕಿಗಳವು.ಸಿಹಿಕುಡುಕ,ಚೀಪೆ ಹಕ್ಕಿ ಎಂಬ ನಾಮಧೇಯವೆಂದು ನಾನು ಅಂದು ಕೊಂಡಿರುವೆ..ಪುಟ್ಟ ಸ್ವರ.ಗೆಜ್ಜೆ ಸದ್ದಿನ ಹಾಗೆ.ಹೂಗಳ ಮೇಲೆ ಜೋತಾಡಿ ಸಿಹಿ ಸವಿದು ರಾಗವಾಗಿ ಹಾಡುವಾಗ ನೋಡುವುದೇ ಸೊಗಸು.
ಆದರೆ ಕೇರೆ ಹಾವನ್ನು ಕಂಡಾಗ ಅವುಗಳ ಧ್ವನಿಯೇ ಬೇರೆ!
ಅವುಗಳ ಗೂಡು,ಮರಿಗಳು ಆ ಮರದಲೇಲ್ಲೋ ಇದೆ.ಮರಿಗಳನ್ನು ಕೇರೆ ಹಾವು ತಿನ್ನುವುದೆಂಬ ಭಯದಿಂದ ವಿಚಿತ್ರ ಧ್ವನಿಯ ಕೂಗು.ಅವುಗಳ ಧ್ವನಿ ಎಷ್ಟು ಏರಿಸಲು ಸಾಧ್ಯವಿತ್ತೋ.. ಅಷ್ಟು ಏರಿಸಿ ಕೂಗುತ್ತಿದ್ದವು.ಆದರೆ ಕೇರೆ ಹಾವು ಮೇಲೆ ಸಾಗುತ್ತಾ ಇತ್ತು.ಆ ಹಕ್ಕಿಗಳು ಹತ್ತಿರ ಹಾರಿ ಕೂಗಿದರೂ...ಊ ಹೂo..
ಈ ಹಕ್ಕಿಗಳ ಕೂಗು ಕೇಳಿ ಎಲ್ಲಿಂದಲೋ ನಾಲ್ಕೈದು ದೊಡ್ಡ ಹಕ್ಕಿಗಳು ಬಂದವು.
ಹಾರಿ,ಹಾರಿ ಕೇರೆ ಹಾವಿನ ಹತ್ತಿರ ಹೋಗಿ ಕೊಕ್ಕಿನಿಂದ ಕುಕ್ಕಿದವು.!
ಮೇಲೆ ಸಾಗುವ ಹಾದಿಯಲ್ಲಿದ್ದ ಕೇರೆ ಹಾವು ಗಲಿ,ಬಿಲಿ ಗೊoಡು ಅತ್ತಿತ್ತ ತಿರುಗಿ ಪೊಟರೆಯೊಂದರ ಒಳಗೆ ಸೇರಿ ಕೊಳ್ಳಲು ಯತ್ನಿಸಿತು.ಆ ಕ್ಷಣಕ್ಕೆ ಏನಾಯಿತೋ? ಕೇರೆ ಹಾವು ದೊಪ್ಪನೆ ಬಿತ್ತು.ಮನೆಯಂಗಳದಲ್ಲಿ ಮುದ್ದೆಯಾಗಿ ಬಿದ್ದು..ಒಂದೇ ಕ್ಷಣದಲ್ಲಿ ಸರ,ಸರನೆ ಸರಿದು ಹೋಯಿತು.ಹಕ್ಕಿ ಮೊಟ್ಟೆಯೊ,ಮರಿಗಳನ್ನೋ ತಿನ್ನುವಾಸೆ ಮಣ್ಣಾಗಿ ಹೋಗಿತ್ತು.ಕೇರೆ ಹಾವು ಮರದಿಂದ ಬೀಳುವುದು ನೋಡಿದರೆ ತಕ್ಷಣ ತೆಂಗಿನ ಮರಕ್ಕೆ ಕೈಮುಗಿಯ ಬೇಕೆಂಬ ನಂಬಿಕೆಯು ಇದೆ.
ಆ ದೊಡ್ಡ ಹಕ್ಕಿಗಳು ಹಾರಿ ಹೋದವು.ಅವುಗಳ ಗೂಡು ಆ ಮರದಲ್ಲಿ ಇಲ್ಲ.ಆದರೂ ಆದರೆ ಪುಟ್ಟ ಹಕ್ಕಿಗಳ ಆತಂಕದ,ಅಸಹಾಯಕತೆಯ ರೋದನ ಕೇಳಿ ಸಹಾಯ ಮಾಡಲು ಹಾರಿ ಬಂದಿದ್ದವು.
ಎಷ್ಟೊಂದು ಹೃದಯ ವೈಶಾಲ್ಯತೆ ಈ ಹಕ್ಕಿಗಳಿಗೆ...ಮನಸು ತುಂಬಿ ಬಂತು.
ಪುಟ್ಟ ಹಕ್ಕಿಗಳು ಈ ಬಿರು ಬಿಸಿಲಿಗೂ ಕೀ...o ಕೀ...o ಎಂದು ರಾಗವಾಗಿ ಹಾಡುತ್ತ ಮಕರಂದ ಸವಿಯುತ್ತಿವೆ.ಫೋಟೋ ತೆಗೆಯೋಣವೆಂದರೆ ತಕ್ಷಣ ಮಾಯ.
ಬಿ.ಅರುಣಾ.ಜಿ.ಭಟ್.
ಕಾಮೆಂಟ್ಗಳಿಲ್ಲ