ಮಗನ ಮದುವೆ ಕಳೆದು ಕೆಲವು ದಿವಸಗಳು ಕಳೆದಿತ್ತು.ಇನ್ನೂ ಸಂಭ್ರಮ,ಸಡಗರ ,ಓಡಾಟ ಮುಗಿದಿರಲಿಲ್ಲ.
ನವ ಜೋಡಿಗಳನ್ನು ಕರೆದು ಕೊಂಡು ಆ ದಿನ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಹೊತ್ತಿಗೆ ಮೊದಲು ಮನೆ ತಲುಪಿ ...ಸುಸ್ತಾಯಿತೆಂದು ಗಾಯತ್ರಿ ಮಲಗಿದ್ದಳು.
ಫ್ಯಾನ್ ಗಾಳಿಯ ಜೊತೆಗೆ ತೋಟದ ಬದಿಯಿಂದ ಬೀಸಿ ಬಂದ ತಂಗಾಳಿಗೆ ಹಾಯೆನಿಸಿತ್ತು.
ಆ ದಿನ ದೇವಸ್ಥಾನದಲಿ ನಡೆದ ಘಟನೆಗಳು ಹಾಗೇ ಕಣ್ಣ ಮುಂದೆ ತೇಲಿ ಬಂತು.
ಜನವೋ ಜನ.ಪ್ರಾರ್ಥನೆ,ಪ್ರಸಾದ ಎಲ್ಲದಕ್ಕೂಕಾದು...ಕಾದು ಸಾಕಾಗಿತ್ತು".ಈ ರೀತಿಯಾದರೆ ಭಕ್ತಿ,ಭಾವ ಮೂಡಿದ ಹಾಗೆಯೇ...ಹಸಿವುತಡೆಯುವುದಕ್ಕೆ ಕಷ್ಟ.."ಎಂದು ಮಗ ಪಿಸು ದನಿಯಲಿ ಹೇಳಿದಾಗ..ಗಾಯತ್ರಿ ಪತಿಯ ಮುಖ ನೋಡಿದ್ದಳು.
ಕೊನೆಗೂ ಊಟದ ಸಮಯ ಬಂತು."ಟಪ್,ಟಪ್" ಎಂದು ಬಾಳೆ ಎಲೆ ಹಾಕುತ್ತಾ ಒಬ್ಬರು ಓಡಿದರು.ಮಗ " ಕ್ಯಾಚ್ ಇಟ್" ಎಂದ.ಗಾಯತ್ರಿ ನಗು ಕಟ್ಟಿ ಕುಳಿತಿದ್ದಳು. .ಸೊಸೆ ಸದ್ದಾಗದ ಹಾಗೇ ಕುಲು,ಕುಲು ನಕ್ಕಿದ್ದಳು.ಸ್ವಲ್ಪ ಹೊತ್ತಲ್ಲಿ ಬಾಳೇ ಎಲೆ ತೊಳೆಯಲು ನೀರು.ಅಷ್ಟರಲ್ಲೇ
ಒಂದೊoದಾಗಿ ಬಡಿಸಲು ಆರಂಭಿಸಿದರು.ಬಡಿಸುವ ಅವಸರಕ್ಕೆ ಅನ್ನದ ಉಂಡೆಗಳು ಉರುಳುರುಳಿ ನೆಲದ ಪಾಲು.ಸಾರು ಬಡಿಸುವ ರಭಸಕ್ಕೆ ಮಗನ ಬೆಣ್ಣೆ ಬಣ್ಣದ ಅಂಗಿ ಮೇಲೆ ಸಾರಿನ ಬಣ್ಣದ ಚಿತ್ತಾರ.ನಗುತ್ತಿದವ ಮೌನವಾದ.ಕೋಪದಿಂದ ಮುಖ ಕೆಂಪಾಗಿತ್ತು.
ಮೌನವಾಗಿಯೇ ಊಟ ಮುಗಿಸಿದ್ದರು.
ಹೊರಗೆ ಬಂದಾಕ್ಷಣ ಮಗ ಊಟ ಬಡಿಸುವ ವಿಚಾರ ಮಾತನಾಡಿದ್ದ.
ದೇವಸ್ಥಾನ ಅಲ್ಲವೇ.ದಿನವೂ ಜನ.ಬಡಿಸಿ,ಬಡಿಸಿ ಅವರಿಗೂ ಸುಸ್ತು ಆಗಿರ ಬಹುದು.ಹಾಗಾಗಿ ಆ ರೀತಿ ಎಸೆಯುವ ಹಾಗೆ ಬಡಿಸುತ್ತಾರೆ...ಎಂದು ಗಾಯತ್ರಿ ಹೇಳಿದ್ದಳು.
ಅಮ್ಮಾ.ದೇವಸ್ಥಾನದ ಊಟವೆಂದರೆ ಅದು ಅನ್ನ ಪ್ರಸಾದ ತಾನೇ.ಶಿಸ್ತು ಹೆಚ್ಚಿರಬೇಕು.
ಆ ರೀತಿ ನೆಲಕ್ಕೆ ಚೆಲ್ಲ ಬಾರದು..ಎಂದ ಮಗ.ಸೊಸೆಯು ಹೌದು,ಹೌದು ಎಂದಳು.
"ಅಷ್ಟು ಜನರಿಗೆ ಬಡಿಸಿ ಅವರಿಗೂ ಸಾಕಾಗಿದೆ.ಹಸಿವೆಯು ಆಗಿದೆ ಅವರಿಗೆ .ಹಾಗೆಲ್ಲ ಹೇಳ ಬಾರದು" ಎಂದು ಗಾಯತ್ರಿಯ ಪತಿ ಗಣೇಶ.
"ಬಡಿಸುವುದು ಅವರ ಕೆಲಸ.ಜೀವನಾಧಾರ.ಕೆಲಸದಲ್ಲಿ ಶ್ರದ್ಧೆ ಇರ ಬೇಕು.ಯಾವ ಕೆಲಸವೇ ಆಗಲಿ ಶಿಸ್ತು ಇರ ಬೇಕೆಂದು ನೀವೇ ಹೇಳುತ್ತಿದ್ದುರಿ.ಬಾಲ್ಯದಿಂದಲೇ ಕೇಳುತ್ತಾ ಬೆಳೆದಿದ್ದೇನೆ.ಅವರು ಶಿಸ್ತಿನಿಂದ ಬಡಿಸಬೇಕು..." ಎಂದು ಮಗ ಹೇಳಿದಾಗ ದಂಪತಿಗಳು ಉತ್ತರ ಸಿಗದೇ ಮುಖ,ಮುಖ ನೋಡಿದ್ದರು.ಬಾಲ್ಯದಿಂದಲೇ ಒಳ್ಳೆಯ ಗುಣ,ನಡತೆಗಳನ್ನು ಕಲಿಸಿ...ಶಿಸ್ತನ್ನೂ ಮೈಗೂಡಿಸಿಕೊಂಡು ಬೆಳೆದ ಮಗ.
ಗಾಯತ್ರಿ ಮಲಗಿದ್ದರೂ ಮಗನ ಮಾತುಗಳು ಮತ್ತೆ,ಮತ್ತೆ ಕೇಳಿದ ಹಾಗೇ ಆಗುತ್ತಿತ್ತು.
ಬಿ.ಅರುಣಾ.ಜಿ.ಭಟ್.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ
(
Atom
)
ಕಾಮೆಂಟ್ಗಳಿಲ್ಲ