ಹೊಸ ಬರಹಗಳು

ನೋವು.

ಒಂದು ತಿಂಗಳಿನಿಂದ ವಿಪರೀತ ಕೆಲಸಗಳ ಒತ್ತಡದಿಂದ ಸುಸ್ತಾಗಿದ್ದಳು ಶೈಲ..ಐದು ಜನ ಅತ್ತಿಗೆಯಂದಿರು,ಬಾವ ,ಮೈದುನರಿರುವ ದೊಡ್ಡ ಸoಸಾರದ ಸೊಸೆ.ಹಳ್ಳಿಯ ಜೀವನ.ದಿನವಿಡೀ ಮಾಡಿದರೂ ಮುಗಿದು ಹೋಗದ ಕೆಲಸಗಳ ಹೊರೆ.ಇನ್ನು ಮನೆಯಲ್ಲಿ ಸಮಾರಂಭ ಇದ್ದರೆ ಕೇಳಬೇಕೇ?
ಮರುದಿವಸ ಮನೆಯಲ್ಲಿ ಪೂಜೆ..ಮಧ್ಯಾಹ್ನದ ಊಟಕ್ಕೆ ಅಷ್ಟು ನೆಂಟರಿಗೆ ಅಡಿಗೆ ಮಾಡುವಷ್ಟ್ತರಲ್ಲಿ ಸಾಕಾಗಿ ಹೋಗಿತ್ತು.
ಅತ್ತಿಗೆಯಂದಿರು,ಮೈದುನ,ಬಾವಂದಿರೆಲ್ಲ ದೂರದ ಊರಿಂದ ಬಂದು ಸುಸ್ತಾಗಿದೆಯೆಂದು ನಿದ್ರಾ ಲೋಕದಲಿದ್ದರು..
ಕೆಲಸದ ಒತ್ತಡದ ನಡುವೆ ಯಾವುದೋ ವಿಷಯಕ್ಕೆ ಕಿರಿ,ಕಿರಿ ಮಾಡಿದ ಮುದ್ದು ಮಕ್ಜಳಿಬ್ಬರ ಮೇಲೆ ಜೋರಾಗಿ ರೇಗಿದ್ದಳು ..ಹಾಗಾಗಿ ಅವರಿಬ್ಬರೂ ಮೌನವಾಗಿದ್ದರು.
ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ಸಾಮಾನು ತರಲು ಹೋದ ಪತಿ ಗಣೇಶ ಇನ್ನೂ ಬಂದಿರಲಿಲ್ಲ..ಎಲ್ಲವನ್ನೂ ಒಬ್ಬನೇ ನಿಭಾಯಿಸ ಬೇಕು..
ನಾಲ್ಕು ಘಂಟೆಯ ಹೊತ್ತಿಗೆ ಸಂಜೆಯ ಚಹಾ,ಕಾಫಿ ತಯಾರಿಸಿ ಎಲ್ಲರನ್ನೂ ಕರೆದಳು ಶೈಲ..ಪಟ್ಟಣದ ಈಗಿನ ಆಗು,ಹೋಗುಗಳ ಸುದ್ದಿ ಮಾತನಾಡುತ್ತಾ..ತಿಂಡಿ ತಿನ್ನಲು ಆರಂಭಿಸಿದರು..ಮೈದುನ ಮಹೇಶ ಒಬ್ಬ ಇನ್ನೂ ನಿದ್ದೆ ಮುಗಿಸಿರಲಿಲ್ಲ.
ತಿಂದ ತಟ್ಟೆಯನ್ನೂ ಎತ್ತಿಡದೆ ಎಲ್ಲರೂ ಹೊರಗೆ ನಡೆದರು..ವಿಶ್ರಾಂತಿಯಿಲ್ಲದೆ ಕೆಲಸ ಮಾಡಿ ..ದಣಿದು ಮಧ್ಯಾಹ್ನ ಸರಿಯಾಗಿ ಊಟ ಮಾಡುವುದಕ್ಕೂ ಆಗಿರಲಿಲ್ಲ..ಹೇಳುವುದು ಯಾರೊಡನೆ? ಕೇಳುವವರು ಯಾರು?
ಅಷ್ಟರಲ್ಲಿ ಮಹೇಶ ಎದ್ದು ಬಂದು ಕಾಫಿ ಕೇಳಿದ  ..ಉಸ್..ಎನ್ನುತ್ತಾ ಮೆಲ್ಲನೆದ್ದು ಹೋಗಿ ಕಾಫಿ ತಂದು ಕೊಟ್ಟಳು ಶೈಲ.." ಕಾಫಿ ಬಿಸಿಯೇ ಇಲ್ಲ.ಬೆಳಗಿನದ್ದಾ..? ಎಂದು ಮುಖ ಸಿಂಡರಿಸುತ್ತಾ ಮಹೇಶ ಕೇಳಿದ..
ಸಹಿಸಿ,ಸಹಿಸಿ ತಾಳ್ಮೆ ಕಳೆದು ಕೊಂಡಳು ಶೈಲ.
ಈಗ ಮಾಡಿದ ಕಾಫಿಯದು..ಸ್ವಲ್ಪ ಹೊತ್ತಾಯಿತೇನೋ..ಎಲ್ಲರ ಜೊತೆಗೆ ಬಂದಿದ್ದರೆ ಬಿಸಿ,ಬಿಸಿ ಕುಡಿಯ ಬಹುದಿತ್ತು..ಎಂದು ನುಡಿದಳು ..ಯಾವ ಘಳಿಗೆಯಲ್ಲಿ ಆ ಮಾತು ನುಡಿದಳೋ..
ಐದು ನಿಮಿಷದಲ್ಲಿ ಮನೆ ರಣ ರಂಗದ ಹಾಗಾಗಿ ಹೋಗಿತ್ತು..
ಮನೆಗೆ ಬರುವುದೇ ಅಪರೂಪ.ಬಂದಿರುವಾಗ ಬಿಸಿ ಕಾಫಿಯೂ ಸಿಗದು..ಎಂದು ಅತ್ತಿಗೆಯರು,ಮೈದುನ,ಬಾವ ಎಲ್ಲರೂ ಜೋರು,ಜೋರಾಗಿ ಹೇಳಿದಾಗ..ಶೈಲಳಿಗೆ ಅಳು ಉಕ್ಕಿ ಬಂತು..ಅಷ್ಟರಲ್ಲಿ ಅತ್ತೆಯೂ ಬಂದು ಏನೇನೋ ಹೇಳಿದಾಗ..ಮತ್ತೂ ಕುಗ್ಗಿ ಹೋಗಿತ್ತು ಮನಸು..
ಪಾಪ .ಅಷ್ಟು ದೂರದಿಂದ ಪ್ರಯಾಣ ಮಾಡಿ ಬಂದು ಅವರಿಗೆ ಮೈ,ಕೈಯೆಲ್ಲಾ ನೋವು..
ಒಂದು ಲೋಟ ಕಾಫಿ ಕೊಡುವುದಕ್ಕೂ ಆಗುವುದಿಲ್ಲವೇ...ಎಂದು ಅತ್ತೆ ನುಡಿದಾಗ..
ಏನು ಹೇಳಲೂ ಮನಸಾಗದೆ ಬಚ್ಚಲು ಮನೆಗೆ ಹೋಗಿ ಬಾಗಿಲು ಹಾಕಿ ಕೊಂಡಳು ಶೈಲ..
ಲೆಕ್ಕ ಹಾಕಿದರೆ ದೊಡ್ಡ ಪಟ್ಟಿಯೇ ಆಗುವಷ್ಟು ನೋವುಗಳು ದೇಹದಲ್ಲಿತ್ತು..ಕಂಡವರೂ ಇಲ್ಲ..ಕೇಳುವವರು ಇಲ್ಲ..
  ಬಿ.ಅರುಣಾ.ಜಿ.ಭಟ್

ಕಾಮೆಂಟ್‌ಗಳಿಲ್ಲ