ಗಿಜಿ - ಗಿಜಿ ಬುಗ್ಗೆ (ಬಲೂನ್)
ಶೀರ್ಷಿಕೆ ಓದುತ್ತಿದ್ದ ಹಾಗೆಯೇ ಬಾಲ್ಯದ ದಿನಗಳು ನೆನಪಾಯಿತೇ? ಆಗಲೇ ಬೇಕು.
ಯಾಕೆಂದರೆ ಈ " ಗಿಜಿ,ಗಿಜಿ ಬುಗ್ಗೆ"ಯ ವಿಷಯವೇ ಬಲು ಚಂದ...
ನಾನು ಪುಟಾಣಿ ಹುಡುಗಿಯಾಗಿದ್ದಾಗಿನ ದಿನಗಳು... ಆಗ ಜಾತ್ರೆಗೆ ಹೋಗುವುದೆಂದರೆ ಸಡಗರವೋ... ಸಡಗರ... ನಾಲ್ಕೈದು ಮೈಲುಗಳಷ್ಟು ನಡೆದು ಹೋಗಬೇಕು.ಆದರೂ ಸುಸ್ತೇ ಇಲ್ಲ.
ನಾಳೆ ಜಾತ್ರೆಗೆ ಹೋಗುವುದೆಂದಾದರೆ ನಿದ್ದೆಯಲ್ಲೂ ಅದೇ ಕನಸು...
ಅಪ್ಪನ ಕೈ ಹಿಡಿದು ಕೊಂಡು ಸಂತೆ ಸುತ್ತುವುದೆಂದರೆ... ಆಹಾ... ವಿವರಿಸಲು ಶಬ್ಧಗಳೇ ಸಿಗದು...
ತುಂಬಾ ದುಡ್ಡು ಕೊಟ್ಟು ಯಾವ ಆಟಿಕೆಗಳನ್ನು ಖರೀದಿಸುತ್ತಿರಲಿಲ್ಲ.ಕಣ್ಣಿನಲ್ಲಿ ನೋಡಿ ಖುಷಿ ಪಡುವುದು ಮಾತ್ರ.ಸ್ಪ್ರಿಂಗ್ ಬಳೆ,ಬಣ್ಣದ ರಿಬ್ಬನ್ ಮಾತ್ರ ಅಪ್ಪ ಕೇಳದೆಯೇ ತೆಗೆದು ಕೊಡುತ್ತಿದ್ದರು...
ಆಗ ಅತ್ಯಂತ ಕುತೂಹಲ ಮತ್ತು ಆಸೆ ಮೂಡಿಸುತ್ತಿದ್ದುದು ಈ " ಗಿಜಿ,ಗಿಜಿ ಬುಗ್ಗೆ"!!
ಉದ್ದವಾದ ಬಿದಿರಿನ ಕೋಲಿನ ತುದಿಗೆ ಈ ಬುಗ್ಗೆಯನ್ನು ಗಟ್ಟಿಯಾಗಿ ಕಟ್ಟಿಕೊಂಡಿರುತಿತ್ತು.
ಹಲವು ಬಣ್ಣಗಳು... ಮೇಲೆಲ್ಲಾ ಚುಕ್ಕಿಗಳು. ಎರಡು ಕೈಗಳಲ್ಲಿ ಅದನ್ನು ಹಿಡಿದು ಕೊಂಡು ಬೀಸಿದಾಗ ಗಿಜಿ,ಗಿಜಿ ಸದ್ದು... ಆ ಸದ್ದು ಕೇಳುವುದೇ ಆಪ್ಯಾಯ ಮಾನ... ಆ ಸದ್ದಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದೆಂದರೆ... ಓಹ್! ಅದಕ್ಕಿಂತ ಮಿಗಿಲಾದ ಸಂತಸ ಬೇರೇನು ಇಲ್ಲ...
ಅದನ್ನು ಮನೆಗೆ ತಂದ ಮೇಲೆ ಒಡೆಯದ ಹಾಗೇ ಉಳಿಸಿ ಕೊಳ್ಳುವ ಕೆಲಸ... ರಾತ್ರಿ ನಿದ್ದೆಯ ನಡುವಲ್ಲೂ ಎದ್ದು ಆ ಬುಗ್ಗೆಗಳನ್ನು ನೋಡಿ... ಒಡೆದಿಲ್ಲವೆಂದು ಸಮಾಧಾನ ಮಾಡಿಕೊಳ್ಳುವುದೂ ಇತ್ತು!
ಇಷ್ಟೆಲ್ಲಾ ಆಸೆ,ಪ್ರೀತಿ ಹುಟ್ಟಿಸಿದ ಆ ಬುಗ್ಗೆ ಸದ್ದಾಗುವುದು ಹೇಗೆ?! ಅದರೊಳಗೆ ಏನಿದೆ?
ಎಂಬ ಕುತೂಹಲ ಕಾಡುತ್ತಿತ್ತು... ಕಿವಿಯ ಹತ್ತಿರ ಹಿಡಿದು ಅಲುಗಿಸಿದರೂ ಏನೆಂದು ಗೊತ್ತಾಗದು...
ಒಂದು ದಿನ ಬುಗ್ಗೆಯನ್ನು ಹಿಡಿದುಕೊಂಡು ಕೋಣೆಯೊಳಗೆ ಕುಳಿತೆ... ಇದರೊಳಗೆ ಏನಿದೆಯೆಂದು ನೋಡಲೇ ಬೇಕೆಂದು ನಿರ್ಧರಿಸಿದೆ.ಸಣ್ಣ ತೂತು ಮಾಡಿ ಅದನ್ನು ತೆಗೆಯಬೇಕೆಂಬ ಅದ್ಭುತ ಯೋಚನೆ ಬಂತು!
ಕ್ಯಾಲೆಂಡರ್ ನಲ್ಲಿ ಚುಚ್ಚ್ಚಿಕೊಂಡಿರುವ "ಸೂಜಿ"ಯನ್ನು ತೆಗೆದು ಕೊಂಡೆ.ಕೋಣೆಯ ಬಾಗಿಲು ಹಾಕಿ ಕುಳಿತೆ.
ಅರೆ-ಕತ್ತಲು... ಮೆಲ್ಲನೆ ಸೂಜಿಯಿಂದ ಚುಚ್ಚಿದೆ.
"ಡಬ್"ಎನ್ನುವ ಸದ್ದು.ಬೆಚ್ಚಿ ಬಿದ್ದೆ.ಬುಗ್ಗೆ ಹರಿದು ಮುದ್ದೆಯಾಗಿ ಮಲಗಿತ್ತು...
ಭಯದಿಂದ ನಡುಗುತಿತ್ತು.ಮೆಲ್ಲಗೆ ಬಾಗಿಲು ತೆಗೆದು... ಬುಗ್ಗೆ ಇರುವ ಜಾಗವೆಲ್ಲ ಹುಡುಕಿದೆ... ಏನೂ ಕಾಣಿಸಲಿಲ್ಲ!
ಕೊನೆಗೆ ಕೈಗಳಿಂದ ತಡಕಾಡಿದೆ... ನಾಲ್ಕೈದು ಸಾಸಿವೆಯ ಕಾಳುಗಳು ಸಿಕ್ಕಿದವು.ಸಾಸಿವೆ ಕಾಳೆಂದು ನಾನು ತಿಳಿದು ಕೊಂಡದ್ದು.
ಸ್ವಲ್ಪ ಹೊತ್ತು ನಿರಾಸೆಯಿಂದ ಸುಮ್ಮನೇ ಕುಳಿತೆ. ಅಷ್ಟು ಚಂದದ ಬುಗ್ಗೆಯನ್ನು ನಾನೇ ಒಡೆದು ಹಾಕಿದೆಯೆಂದು ಬೇಸರಿಸಿದೆ.
ಸೂಜಿ ಚುಚ್ಚಿದ ಬಲೂನ್ ಸ್ಥಿತಿ ನನ್ನದಾಗಿತ್ತು.
ಹರಿದ ಬುಗ್ಗೆಯ ತುಂಡುಗಳನ್ನು ಆರಿಸಿ ತೆಗೆದು ಕೊಂಡು ಬಾಯಿಯಲ್ಲಿ ಗುಳ್ಳೆ ಮಾಡಿ ಅಂಗೈ ಮೇಲೆ ಉಜ್ಜುತ್ತಾ... "ಪೀಮ್ ಪೀಮ್" ಸದ್ದು ಮಾಡುತ್ತಾ ಎದ್ದು ಹೋದೆ.
ಅಷ್ಟು ಸಣ್ಣ ಆಟದ ವಸ್ತು.ಆದರೂ ಎಷ್ಟು ಸುಂದರ ನೆನಪನ್ನು ಮನದಲ್ಲಿ ಉಳಿಸಿದೆ!
ಎಷ್ಟು ಸಣ್ಣ ವಿಷಯವಪ್ಪಾ... ಎಂದು ನಗು ಬಂತೇ? ಯಾರಿಗೂ ಹೇಳ್ಬೇಡಿ ಆಯ್ತಾ? ಓದಿ ನಕ್ಕು ಬಿಡಿ!
ಈ "ಗಿಜಿ,ಗಿಜಿ ಬುಗ್ಗೆ "ಯ ಪರಿಚಯವಿದ್ದವರು ಒಂದು ಕ್ಷಣ ಖಂಡಿತವಾಗಿಯೂ "ಪುಟಾಣಿ"ಗಳಾಗಿ ಬಿಡುತ್ತಾರೆ. ಹೌದೋ..? ಅಲ್ಲವೋ..?
ಕಾಮೆಂಟ್ಗಳಿಲ್ಲ