ಕನಸಿನ ಅರಮನೆ
ಮನದಲ್ಲಿ ನೋವು ತುಂಬಿದಾಗ
ನಾನು ಮೆಲ್ಲನೆ ಹೊರಟು ಹೋಗುವೆ
ಮನದಾಳದ ನನ್ನ ಕನಸಿನ ಅರಮನೆಗೆ
ಅನ್ಯರಿಗೆ ಪ್ರವೇಶವಿಲ್ಲ ಅಲ್ಲಿಗೆ ।।೧।।
ಆ ಮನೆಯಲ್ಲಿ ನೋವಿಲ್ಲ, ಅಳುವಿಲ್ಲ
ಕಷ್ಟ-ನಷ್ಟಗಳಿಲ್ಲ, ರೋಗ-ರುಜಿನಗಳಿಲ್ಲ
ಸಂಭ್ರಮ ಸಡಗರವೇ ತುಂಬಿರುವುದು ಅಲ್ಲೆಲ್ಲಾ!
ತಂಗಾಳಿ ಬೀಸುತಿರುವುದು ಸುತ್ತೆಲ್ಲಾ ।।೨।।
ಆ ಮನೆಯಲ್ಲಿ ನಾ ನಾಯಕಿಯಾಗುವೆ
ಗಾಯಕಿಯಾಗುವೆ, ಹಾಡುತ್ತಾ... ಮೈಮರೆವೆ
ಹಾಡುವ ಹಕ್ಕಿಯಾಗುವೆ, ಮಿನುಗುವ ಚುಕ್ಕಿಯಾಗುವೆ
ಅರಳಿದ ಹೂಗಳ ಪರಿಮಳವೇ ನಾನಾಗುವೆ ।।೩।।
ಆ ಸುಖದ ಅರಮನೆಯಿಂದ ಹೊರಬರಲು
ಬಲು ಬೇಸರವಾಗುವುದು ಎನ್ನ ಮನಕೆ...
ಆದರೋ... ಬರಲೇ ಬೇಕು ವಾಸ್ತವಕೆ
ಚಿಂತಿಸಿಲೇ ಬೇಕು ನಾಳಿನ ಭವಿಷ್ಯಕೆ ।।೪।।
- ಅರುಣಾ
ಕಾಮೆಂಟ್‌ಗಳಿಲ್ಲ