ಚಂದಮಾಮ
ಚಂದಮಾಮ... ಚಂದ್ರಮ,ಚಂದಪ್ಪ..ಚಂದಿರ... ಆಹಾ... ಹೆಸರೇ ಬಲುಚಂದ... ನಮ್ಮ ಬಾಲ್ಯ,ನಮ್ಮ ಮಕ್ಕಳ ಬಾಲ್ಯ ಎಲ್ಲವೂ ಇವನು ಬಲ್ಲ. ಇವನ ನೋಡುತ್ತಿದ್ದರೆ ವಯಸ್ಸಿನ ಲೆಕ್ಕವಿಲ್ಲ...
ಪುಟ್ಟ ಮಕ್ಕಳು ಅಚ್ಚರಿ ತುಂಬಿದ ಕಂಗಳಿಂದ ನೋಡುತ್ತಾ ಸಂಭ್ರಮಿಸುವ ಪರಿ ಮನ ಮೋಹಕ... ಮಗು ಊಟ ಮಾಡದೇ ಹಠ ಮಾಡಿದಾಗಲಂತೂ ಈ ಚಂದ ಮಾಮ ಬೇಕೇ ಬೇಕು. ಊಟ ಮಾಡಿಸುವ ಅಮ್ಮನ ಬಾಯಿ ಯಿಂದ ಹೊಸ,ಹೊಸ ಹಾಡುಗಳು ಕೇಳಿ ಬರುತ್ತದೆ.ಕೇಳುವವರ ಮನಸು... ಆ ಮನೆ ಎಲ್ಲಾ ಉಲ್ಲಸಿತ...
ಆದರೆ ಈಗಿನ ಕಾಲದ ಮಕ್ಕಳನ್ನು ಊಟ ಮಾಡಿಸಲು ಚಂದಮಾಮನನು ತೋರಿಸುವುದು ಕಡಿಮೆಯಾಗಿದೆಯೇ? ಕತ್ತಲಾದ ಹಾಗೆ ಎಲ್ಲರೂ ದೂರ ದರ್ಶನ ವೀಕ್ಷಿಸುತ್ತಾರೆ.ಹೊರಗಿನ ಪರಿವೆಯೇ ಇಲ್ಲದಂತೆ ಇರುತ್ತಾರೆ. ಊಟ ಮಾಡಿಸುವ ಹೊತ್ತಿನಲ್ಲಿ ಈಗಿನ ಮಕ್ಕಳಿಗೆ ಮೊಬೈಲ್ ಬೇಕು! ಮಕ್ಕಳಿಗೆ ಬೇಕು ಎನ್ನುವುದಕ್ಕಿಂತ ಅದನ್ನು ಅಮ್ಮಂದಿರು ಮಕ್ಕಳಿಗೆ ಅಭ್ಯಾಸ ಮಾಡಿಸಿದ್ದಾರೆ ಎನ್ನ ಬಹುದು. ಅದನ್ನು ಬಿಟ್ಟರೆ ಕಾರ್ಟೂನುಗಳು... ಇದರ ಮೋಡಿಗೆ ಒಳಗಾದ ಮಕ್ಕಳನ್ನು ನೋಡಿದಾಗ ಕೆಲವೊಮ್ಮೆ ಬೇಸರವೂ ಆಗುತ್ತದೆ.
ಇನ್ನು ಪ್ರೇಮಿಗಳಿಗೂ ಈ ಚಂದಿರನಿಗೂ ನಂಟಿದೆ.ವಿರಹ ಹೆಚ್ಚಿಸಲು, ಪ್ರೀತಿ ಉಕ್ಕಿಸಲು ಚಂದಿರ ಕಾರಣವಾಗುವುದಿದೆ. ಹಲವಾರು ಪ್ರೇಮ ಗೀತೆಗಳೂ ಹುಟ್ಟುತ್ತವೆ... ಚಲನ ಚಿತ್ರಗಳಲ್ಲಿ ಚಂದಿರನ ಕುರಿತ ಚಿತ್ರ ಗೀತೆಗಳು ತುಂಬಾ ಇವೆ. ಕೇಳಿದಷ್ಟೂ ಸಾಕೆನಿಸದ ಗೀತೆಗಳವು. ಆದರೆ ಈಗಿನ ಪ್ರೇಮಿಗಳು ರಾತ್ರಿಯ ಹೊತ್ತು ಅಂಗಳಕ್ಕೆ ಬಂದು ಚಂದಿರನ ನೋಡುತ್ತಾ... ಕನಸು ಕಾಣುವರೇ?
ಈ ಸಂಶಯಕ್ಕೂ ಕಾರಣವಿದೆ.ಯಾವಾಗಲೂ ತಲೆ ತಗ್ಗಿಸಿಯೇ ಕುಳಿತು... ಮೊಬೈಲ್ ವಾಟ್ಸಾಪ್ ನಲ್ಲಿ ಸಂದೇಶ ರವಾನಿಸುತ್ತ ಇರುತ್ತಾರೆ. ತನ್ನ ಪ್ರೇಮಿ ಅಥವಾ ಪ್ರೇಯಸಿಯನ್ನು ನೋಡ ಬಯಸಿದಾಕ್ಷಣ "ಕ್ಲಿಕ್" ಎಂದು ಸೆಲ್ಫಿ... ಅತ್ತಿತ್ತ ಫೋಟೋ ರವಾನೆ. ಚಂದಿರನ ನೋಡುತ್ತಾ ಕನಸು ಕಾಣುವುದೇಕೆ..
ಹಿರಿಯರು ರಾತ್ರಿ ಹೊತ್ತು ಆಗಸ ನೋಡುತ್ತಾ ಅಮವಾಸ್ಯೆಗೆ,ಹುಣ್ಣಿಮೆಗೆ ಎಷ್ಟು ದಿವಸ ಇದೆಯೆಂದು ಅಂದಾಜಿಸುವುದು ಇದೆ. ಈ ಸುಂದರ ಚಂದಿರನ ವಿಷಯ ಬರೆಯುತ್ತಾ ಹೋದರೆ ನಿಲ್ಲಿಸಲು ಮನಸಾಗದು... ಬಾಲ್ಯದಿಂದಲೇ ಜೊತೆಗಿರುವವನನು ಮರೆಯಲು ಸಾಧ್ಯವೇ? ವಯಸ್ಸನ್ನು ಮರೆಸಿ ಹಲವು ಭಾವಗಳ ಮೂಡಿಸುವ... ಮೈಮನದಿ ಉಲ್ಲಾಸ ತುಂಬುವ ಈ ಚಂದಿರನಿಗೆ ಪ್ರೀತಿಯ ನಮಸ್ಕಾರ. ಪುಟ್ಟ ವಿಷಯವಾದರೂ ಹಂಚಿ ಕೊಂಡಾಗ ಮನಸು ಹಗುರ...
ಬಿ.ಅರುಣಾ.ಜಿ.ಭಟ್.

ಕಾಮೆಂಟ್ಗಳಿಲ್ಲ