ಹೊಸ ಬರಹಗಳು

ಮಳೆ ಮತ್ತು ಕಿಟಕಿ

ಧೋ..ಧೋ ಎಂದು
ಒಂದೇ ರಾಗದಲಿ
ಮಳೆ ಸುರಿಯುತಿರಲು
ಆ ಸೊಬಗ ಸವಿಯ ಬೇಕು
ಕಿಟಕಿಯ ಬಳಿ ಕುಳಿತು..
ಚಿಂತೆಗಳನ್ನೆಲ್ಲಾ ಮರೆತು...
ತಲೆ ಬಾಗದೆ ನಿಂತಿರುವ
ತೆಂಗು,ಕಂಗಿನ ಮರಗಳು
ಗಾಳಿಯಬ್ಬರಕೆ
ಸುತ್ತು,ಸುತ್ತು ಸುತ್ತಿ
ತಲೆ ಬಾಗುವ ನೋಟ 
ಸೋಲೆನೆಂದು ಆ ಕ್ಷಣದಲೇ
ಮತ್ತೆ ತಲೆಯೆತ್ತಿ ನಿಲ್ಲುವ ಹಠ..
ಬಾಳೆ ಎಲೆಗಳು ಬಾ..ಬಾ ಎಂದು
ಮಳೆಯಲ್ಲಿ ನೆನೆಯೆಂದು
ಕೈಬೀಸಿ ಕರೆಯುವ ಭಾವ...
ನೋಡುತ್ತಾ..ನೋಡುತ್ತಾ
ಕಳೆದು ಹೋದ ಬಾಲ್ಯ
ಮತ್ತೆ ಮರಳಿದ ಹಾಗೇ...
ಹಪ್ಪಳ,ಸಾಂತಾಣಿ .ಪುಳಿಂಕೋಟೆ
ಗಳ ಸವಿದ ಆ ದಿನಗಳೇ.
ಹಳೆಯ ಕಾಲದ ಮನೆ
ಪುಟ್ಟ ಕಿಟಕಿ...
ಒಡ ಹುಟ್ಟಿದವರ ನಡುವೆ
ಈ ಕಿಟಕಿಯ ಬಳಿ ಕುಳಿತು
ಮಳೆ ನೋಡಲು..ಜಾಗಕ್ಕಾಗಿ
ಹುಸಿ ಜಗಳ..
ಆ ದಿನಗಳ ನೆನಪಿನಲೆಯಲಿ
ತೇಲುತಿರಲು..
ಮನೆಯ ದೊಡ್ಡ ಕಿಟಕಿಯ
ಪಕ್ಕದಲೆಲ್ಲೋ...ಆ ತಿಂಡಿಗಳ
ಪರಿಮಳ..
ಮನವ ಹಗುರ ಗೊಳಿಸುವ
ಮಳೆಗೂ..ಈ ಕಿಟಕಿಗೂ
ಬಿಡಿಸಲಾಗದ ನಂಟು..
ವಿವರಿಸಲಾಗದ ..ಭಾವನೆಗಳ
ಸವಿ ನೆನಪುಗಳ ಗಂಟು...
ಅರುಣಾ.ಜಿ.ಭಟ್

1 ಕಾಮೆಂಟ್‌: