ಹೊಸ ಬರಹಗಳು

ಓ ಕಾಲವೇ ನಿನಗೇಕೆ ಇಷ್ಟು ಆತುರ !

ಓ ಸಮಯವೇ ನಿನಗೇಕೆ ಇಷ್ಟು ಆತುರ
ಮೊನ್ನೆ ಮೊನ್ನೆವರೆಗೂ ಹಿಡಿಯುತ್ತಿದ್ದ
ಅಪ್ಪನ ಸದೃಢ ಕೈಯ್ಯಲ್ಲಿ ನೆರಿ ಮೂಡಿದೆ
ಕಪ್ಪನೆಯ ದಪ್ಪ ಕೂದಲಿಗೆ ಮುಪ್ಪಾಗಿದೆ !

ಸದಾ ಹುರುಪಿನಿಂದ ಇರುತ್ತಿದ್ದ
ಅಮ್ಮ ಇಂದು ಬಸವಳಿದ್ದಿದ್ದಾರೆ
ಬೇಗ ಬೇಗನೆ ರುಚಿ ಊಟ ಬಡಿಸುತ್ತಿದ್ದ
ಕೈ ನಡುವಿಕೆಯಿಂದ ನಿಧಾನವಾಗಿದೆ !

ನಿರಂತರವಾಗಿ ತಮಾಷೆ ಹೇಳುತ್ತಿದ್ದ
ಅಜ್ಜನ ತುಂಟತನ ಕಡಿಮೆಯಾಗಿದೆ
ಪ್ರೀತಿಯಿಂದ ಪುಳ್ಳಿ ಎಂದು ಕರೆದಪ್ಪಿದ
ಅಜ್ಜಿ ಏಕೋ ಹಾಗೆ ಸುಮ್ಮನಿದ್ದಾರೆ !

ತೋಟದಲ್ಲಿ ಬೆಳೆದಿದ್ದ ದೊಡ್ಡ ಹುಣಸೆ ಮರ
ನೋಡ ನೋಡುತ್ತಿದ್ದಂತೆ ಅಳಿದು ಹೋಗಿದೆ
ದನವನ್ನು ಸಾಕುತ್ತಿದ್ದ ಆ ಮಣ್ಣಿನ ಕೊಟ್ಟಗೆ
ಕನಸಲ್ಲೂ ಕಾಣದಷ್ಟು ಕಳೆದು ಹೋಗಿದೆ !

ಅಂಗಳದಲ್ಲಿ ಎಳೆದಾಡಿದ ಹಾಳೆ ರೈಲು,
ಮುಟ್ಟಾಟ, ಕೆರೆ ದಡ, ಕಣ್ಣಾ ಮುಚ್ಚಾಲೆ,
ಚೆನ್ನೆ ಮಣೆ, ಜಿಬಿಲಿಯಂತಹ ಆಟಗಳು
ಇನ್ನು ಪ್ರಯಾಣಿಸುವಾಗ ನೆನಪು ಮಾತ್ರ...

ಓ ಕಾಲವೇ ನಿನಗೇಕೆ ಇಷ್ಟು ಆತುರ
ಇನ್ನು ಮಕ್ಕಳಂತೆ ಇರಬೇಕೆಂಬ ಕಾತರ
ಮತ್ತೆ ಇದೆಲ್ಲ ಸಿಗಲಾರದೆಂಬ ಬೇಸರ
ಮುಳುಗುತ್ತಿದ್ದಾನೆ ಬಾನಂಚಿನಲಿ ನೇಸರ !

ಸಚಿನ್ ಕೃಷ್ಣ ಭಟ್
ಬದಿಕೋಡಿ

ಕಾಮೆಂಟ್‌ಗಳಿಲ್ಲ